Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಸೇಡಿಯಾಪು ಪ್ರಶಸ್ತಿಗೆ ಪ್ರೊ. ಮಲ್ಲೇಪುರಂ ಆಯ್ಕೆ

ಸೇಡಿಯಾಪು ಪ್ರಶಸ್ತಿಗೆ ಪ್ರೊ. ಮಲ್ಲೇಪುರಂ ಆಯ್ಕೆ

ಸುದ್ದಿಕಿರಣ ವರದಿ
ಸೋಮವಾರ, ಜೂನ್ 13

ಸೇಡಿಯಾಪು ಪ್ರಶಸ್ತಿಗೆ ಪ್ರೊ. ಮಲ್ಲೇಪುರಂ ಆಯ್ಕೆ
ಉಡುಪಿ: ಕನ್ನಡದ ಖ್ಯಾತ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ 2022ನೇ ಸಾಲಿನ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ, ಕಥನ ಕಾವ್ಯ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ 10 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

1952ರಲ್ಲಿ ಜನಿಸಿದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಹಾಗೂ ಸಂಸ್ಕೃತ ಎಂ.ಎ ಪದವಿ ಪಡೆದು ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು.

1992ರಲ್ಲಿ ಹಂಪಿ ಕನ್ನಡ ವಿ.ವಿ ಸೇರಿ ಅಲ್ಲಿ ಪ್ರವಾಚಕರಾಗಿ, ಅಧ್ಯಯನಾಂಗದ ನಿರ್ದೇಶಕರಾಗಿ, ಕುಲಸಚಿವರಾಗಿ, ಡೀನ್ ಆಗಿ, ಪ್ರಸಾರಾಂಗ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. 2010ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾದರು.

ಹಲವಾರು ಶೈಕ್ಷಣಿಕ ಸಂಸ್ಥೆಗಳ ಸದಸ್ಯತ್ವ ಪಡೆದ ಅವರು ತೊಂಭತ್ತಕ್ಕೂ ಹೆಚ್ಚು ಸಾಹಿತ್ಯ, ಸಂಸ್ಕೃತಿ ಭಾಷೆಗೆ ಸಂಬಂಧಿಸಿದ ಪುಸ್ತಕ ಪ್ರಕಟಿಸಿದ್ದಾರೆ. ಕಲಬುರ್ಗಿ ಪಾಲಿಇನ್ ಸ್ಟಿಟ್ಯೂಟ್ ಸಂಸ್ಥೆಯ ಗೌರವ ನಿರ್ದೇಶಕರಾಗಿದ್ದಾರೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಂ.ಫಿಲ್ ಹಾಗೂ ಪಿಎಚ್.ಡಿ ಅಧ್ಯಯನಕ್ಕೆ ಮಾರ್ಗದರ್ಶಕರಾಗಿದ್ದಾರೆ.

ಅವರ ಸಾಹಿತ್ಯ ಸೇವೆ ಹಾಗೂ ಸಂಶೋಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಮಾಜ ಕಲ್ಯಾಣ ಇಲಾಖೆಯಿಂದ ಡಾ| ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ನೀಡುವ ವಿ.ಎಂ. ಇನಾಂದಾರ್ ಪ್ರಶಸ್ತಿ, ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ, ಸಂಸ್ಕೃತಿ ಸಮ್ಮಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಸಾಹಿತ್ಯ ಪ್ರಶಸ್ತಿ ಇತ್ಯಾದಿಗಳಿಗೆ ಭಾಜನರಾಗಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!