ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಮಧ್ವ ಶಂಕರ ಎಂದು ಹೆಸರಿಡುವಂತೆ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದುಪೇಂದ್ರತೀರ್ಥ ಪೀಠಾಧೀಶ ಉಡುಪಿ ಪುತ್ತಿಗೆ ಮಠಾಧಿಪತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಲಹೆ ನೀಡಿದ್ದಾರೆ.
ಇಡೀ ಜಗತ್ತು ಲಾಗಾಯ್ತಿನಿಂದ ಭಾರತವನ್ನು ಮುಖ್ಯವಾಗಿ ಆಧ್ಯಾತ್ಮಿಕ ದೃಷ್ಟಿಯಿಂದಲೇ ಗುರುತಿಸುತ್ತಿದೆ. ರಾಜಕಾರಣಿಗಳೂ ಭಾರತವನ್ನು ವಿಶ್ವಗುರು ಮಾಡಬೇಕೆಂದು ಪುನರುಚ್ಚರಿಸುತ್ತಿದ್ದಾರೆ. ಈ ದೃಷ್ಟಿಯಲ್ಲಿ ಭಾರತೀಯ ಮೇರು ದಾರ್ಶನಿಕರಾಗಿ ಈಗಾಗಲೇ ವಿಶ್ವಗುರು ಎಂದೆನಿಸಿರುವ ಹಾಗೂ ಮಂಗಳೂರು ಸಮೀಪದ ಉಡುಪಿ ಮತ್ತು ಶೃಂಗೇರಿಯಲ್ಲಿ ತಂತಮ್ಮ ಕೇಂದ್ರ ಸ್ಥಾಪಿಸಿ ಶತ ಶತಮಾನಗಳಿಂದ ತಮ್ಮ ಆಧ್ಯಾತ್ಮಿಕ ಕಾರ್ಯಕ್ಷೇತ್ರಗೊಳಿಸಿರುವ ಲೋಕಗುರು ಶ್ರೀ ಮಧ್ವಾಚಾರ್ಯ ಮತ್ತು ಜಗದ್ಗುರು ಶ್ರೀ ಶಂಕರಾಚಾರ್ಯರ ಹೆಸರಲ್ಲಿ ಪರಶುರಾಮ ಕ್ಷೇತ್ರದಲ್ಲಿರುವ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಶ್ರೀಮಧ್ವ ಶಂಕರ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವುದು ಅತ್ಯಂತ ಅರ್ಥಪೂರ್ಣ, ಅಪೂರ್ವ ಮತ್ತು ಮೌಲಿಕವೆನಿಸುತ್ತದೆ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಯೋಧ್ಯೆಯಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಮಾನ ನಿಲ್ದಾಣ ಮೂಡಿಬಂದಂತೆ, ದಾರ್ಶನಿಕ ಆಚಾರ್ಯರುಗಳ ನೆಲೆವೀಡಾದ ದಕ್ಷಿಣ ಭಾರತದ ವಿಮಾನ ನಿಲ್ದಾಣಕ್ಕೆ ಶ್ರೀಮಧ್ವ ಶಂಕರರ ನಾಮಕರಣ ಭಾರತದ ದಾರ್ಶನಿಕ ಪರಂಪರೆಗೆ ಗೌರವ ಸಲ್ಲಿಸಿದಂತಾಗುತ್ತದೆ. ಮಾತ್ರವಲ್ಲದೆ, ಜಗತ್ತಿನಲ್ಲಿ ಧರ್ಮ ಪ್ರಚಾರಕ್ಕೆ ಅದು ಪೂರಕವೂ ಆಗುವುದಲ್ಲದೆ ಭಾವೈಕ್ಯಕ್ಕೂ ಇಂಬು ನೀಡುತ್ತದೆ ಎಂದೂ ತಿಳಿಸಿರುವ ಪುತ್ತಿಗೆ ಶ್ರೀಗಳು, ಸಂಬಂಧಪಟ್ಟವರು ಗಮನಹರಿಸುವಂತೆ ಅಪೇಕ್ಷಿಸಿದ್ದಾರೆ.
ಆಧ್ಯಾತ್ಮಿಕತೆಯೇ ಭಾರತದ ಮೂಲ ಮತ್ತು ಅಪೂರ್ವ ಸಂಪತ್ತಾದ್ದರಿಂದ ಧಾರ್ಮಿಕ ಆಧ್ಯಾತ್ಮಿಕ ಕ್ಷೇತ್ರದಲ್ಲೇ ಭಾರತಕ್ಕೆ ಮುಂದೆ ಜಗತ್ತಿನ ನೇತೃತ್ವ ಪಡೆಯಲು ಉಜ್ವಲ ಹಾಗೂ ವಿಪುಲ ಅವಕಾಶ ಇರುವುದರಿಂದಲೂ ಶ್ರೀ ರಾಮಾನುಜಾಚಾರ್ಯ, ಬಸವಣ್ಣ ಮೊದಲಾದ ಮಹಾ ಧಾರ್ಮಿಕ ನೇತಾರರ ಮೂಲಸ್ಥಳಗಳ ಸಮೀಪದಲ್ಲಿರುವ ದೇಶದ ಉಳಿದ ವಿಮಾನ ನಿಲ್ದಾಣ ಹಾದಿಗಳಿಗೂ ಆಯಾ ಧಾರ್ಮಿಕ ನೇತಾರರ ನಾಮಕರಣ ಮಾಡುವುದೇ ಉಳಿದೆಲ್ಲ ಆಯ್ಕೆಗಳಿಗಿಂತಲೂ ಅತ್ಯಂತ ಪ್ರಶಸ್ತ ಎಂದು ಶ್ರೀಪಾದರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೊರೊನಾ ಇತ್ಯಾದಿಗಳ ಹಿನ್ನೆಲೆಯಲ್ಲಿ ಚಿಂತಿಸಿದಾಗ ಜಗತ್ತಿಗೆ ಇದೀಗ ಆಧ್ಯಾತ್ಮಿಕ ಆಂದೋಲನದ ಆವಶ್ಯಕತೆ ಬಹುವಾಗಿ ಎದ್ದುಕಾಣುತ್ತಿದ್ದು ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಧ್ಯಾತ್ಮಿಕತೆಗೆ ಸರಕಾರಗಳು ಹೆಚ್ಚಿನ ಒತ್ತುನೀಡುವ ದೃಷ್ಟಿಯಲ್ಲೂ ಶ್ರೀ ಮಧ್ವಶಂಕರ ವಿಮಾನ ನಿಲ್ದಾಣ ನಾಮಕರಣ ಅತ್ಯಂತ ಸೂಕ್ತ ಹಾಗೂ ಸಂದರ್ಭೋಚಿತ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಮಧ್ವ ಶಂಕರ ಹೆಸರಿಡಿ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...