Monday, July 4, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಮರು ರೂಪುಗೊಳ್ಳುತ್ತಿರುವ ದೇಶದ ಆರ್ಥಿಕತೆ

ಮರು ರೂಪುಗೊಳ್ಳುತ್ತಿರುವ ದೇಶದ ಆರ್ಥಿಕತೆ

ಉಡುಪಿ: ಕೊರೋನಾ, ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದರೂ, ದೇಶದ ಆರ್ಥಿಕತೆ ಪ್ರಸ್ತುತ ಮರು ರೂಪುಗೊಳ್ಳುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ್ ಕಾಶಿನಾಥ್ ಮರಾಠೆ ಹೇಳಿದರು.

ಇಲ್ಲಿನ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕ್ ಆಶ್ರಯದಲ್ಲಿ ನಡೆದ ಭಾರತದ ಪ್ರಸ್ತುತ ಸನ್ನಿವೇಶದಲ್ಲಿ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವಿಷಯ ಕುರಿತಂತೆ ವಿವಿಧ ರಂಗಗಳ ಗಣ್ಯರೊಂದಿಗೆ ನಡೆಸಲಾದ ಸಂವಾದದಲ್ಲಿ ಮಾತನಾಡಿದರು.

ಎರಡು ವರ್ಷದ ಹಿಂದೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜಾರಿಗೊಳಿಸಿದ್ದ ರಚನಾತ್ಮಕ ನೀತಿಗಳಿಂದಾಗಿ ಇನ್ನೊಂದು ವರ್ಷದೊಳಗೆ ಭಾರತದ ಆರ್ಥಿಕತೆ ಪುಟಿದೇಳುತ್ತದೆ. ಕೊರೊನಾದಿಂದಾಗಿ ದೇಶದಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಿದೆ, ಹಣದ ಹರಿವೂ ಹೆಚ್ಚಾಗಿದೆ. ಬ್ಯಾಂಕುಗಳು ಕಡಿಮೆ ಸಿಬ್ಬಂದಿಯೊಂದಿಗೆ ಹೆಚ್ಚಿನ ಒತ್ತಡದಲ್ಲಿಯೂ ಒಳ್ಳೆಯ ಕೆಲಸ ಮಾಡಿವೆ. ಬ್ಯಾಂಕುಗಳಲ್ಲಿ ಠೇವಣಿ ಸಂಗ್ರಹ ಹೆಚ್ಚಾಗಿದೆ. ಆದರೆ, ಸಾಲ ಪಡೆಯುವವರ ಸಂಖ್ಯೆ ಕಡಿಮೆಯೂ ಆಗಿದೆ. ಆದರೆ, ಇದು ತಾತ್ಕಾಲಿಕ ಬೆಳವಣಿಗೆ ಎಂದವರು ವಿಶ್ಲೇಷಿಸಿದರು.

ಕೇಂದ್ರ ಸರಕಾರ ಜಾರಿಗೆ ತಂದ ನೋಟು ಅಮಾನ್ಯೀಕರಣ, ಜಿ.ಎಸ್.ಟಿ ಮತ್ತು ರೇರಾ (ರಿಯಲ್ ಎಸ್ಟೇಟ್ ರೆಗ್ಯುಲೆಟರಿ ಅಥಾರಿಟಿ) ಕಾಯ್ದೆ ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಪ್ರಭಾವ ಬೀರಿ, ಆರಂಭದಲ್ಲಿ ಅವುಗಳಿಂದ ಸ್ವಲ್ಪ ಮಟ್ಟಿನ ಆರ್ಥಿಕ ಬೆಳವಣಿಗೆ ಸ್ಥಗಿತವಾಗಿದೆಯಾದರೂ ಇಂದು ನೋಟು ಅಮಾನ್ಯೀಕರಣದಿಂದ ಕ್ಯಾಶ್ ಲೆಸ್ ಎಕಾನಮಿ ಸಾಧ್ಯವಾಗಿದೆ. ಜಿ.ಎಸ್.ಟಿ ವ್ಯವಸ್ಥೆಯಿಂದ ಇಂದು ಎಲ್ಲಾ ವ್ಯವಹಾರಸ್ಥರು ನಿರಾತಂಕಿತರಾಗಿದ್ದಾರೆ. ರೆರಾ ಕಾಯ್ದೆಯಿಂದ ಸಾಮಾನ್ಯ ಜನರ ಆಶಯಗಳ ರಕ್ಷಣೆಯಾಗಿದೆ ಎಂದರು.

ಲಡಾಖ್ ಆಕ್ರಮಣಕ್ಕೆ ಪ್ರತ್ಯುತ್ತರವಾಗಿ ಭಾರತ, ಚೀನಾದ ವಸ್ತುಗಳನ್ನು ಬಹಿಷ್ಕರಿಸಿದ ಪರಿಣಾಮ ಚೀನಾದಲ್ಲಿ ಉತ್ಪಾದನಾ ಕೇಂದ್ರ ಹೊಂದಿದ್ದ 450ಕ್ಕೂ ಹೆಚ್ಚು ಕಂಪೆನಿಗಳು ಇಂದು ಭಾರತದಲ್ಲಿ ಉತ್ಪಾದನಾ ಕೇಂದ್ರ ತೆರೆಯುತ್ತಿವೆ. ಅವು ದೇಶದ ಆರ್ಥಿಕತೆಗೆ ಕೊಡುಗೆ ನೀಡಲಿವೆ ಎಂದು ಮರಾಠೆ ಆಶಿಸಿದರು.

ದೇಶದ ಕೃಷಿ ಕ್ಷೇತ್ರ ಬಲಿಷ್ಠವಾಗಿದೆ ಎನ್ನುವುದಕ್ಕೆ ಪ್ರಸ್ತುತ ದೇಶದಲ್ಲಿ ಅಗತ್ಯಕ್ಕಿಂತ 2.5 ಪಟ್ಟು ಆಹಾರೋತ್ಪನ್ನಗಳ ಸಂಗ್ರಹ ಇರುವುದೇ ಸಾಕ್ಷಿ ಎಂದರು.

ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಸುವರ್ಣ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!