Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಮೀನುಗಾರ ಸಂಕಷ್ಟ ಪರಿಹಾರ 10 ಲಕ್ಷಕ್ಕೇರಿಸಲು ಸಲಹೆ

ಮೀನುಗಾರ ಸಂಕಷ್ಟ ಪರಿಹಾರ 10 ಲಕ್ಷಕ್ಕೇರಿಸಲು ಸಲಹೆ

ಉಡುಪಿ: ಮೀನುಗಾರಿಕೆ ಸಂದರ್ಭದಲ್ಲಿ ಪ್ರಾಣಹಾನಿಗೊಳಗಾಗುವ ಮೀನುಗಾರರಿಗೆ ನೀಡುವ ಸಂಕಷ್ಟ ಪರಿಹಾರಧನ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಮೀನುಗಾರಿಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಅವರು, ಕಳೆದ ನ. 30ರಂದು ಮಂಗಳೂರಿನಲ್ಲಿ ನಡೆದ ಮೀನುಗಾರಿಕೆ ದೋಣಿ ದುರಂತ ಘಟನೆ ಖೇದಕರ ಸಂಗತಿ. ಇನ್ನು ಮುಂದೆ ಇಂಥ ಘಟನೆ ಮರುಕಳಿಸದಂತೆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ ಪ್ರಮೋದ್, ಅಗಲಿದ ಜೀವಕ್ಕೆ ಬೆಲೆ ಕಟ್ಟಲಾಗದು. ಸಂಕಷ್ಟದಲ್ಲಿ ಹೊಟ್ಟೆಪಾಡಿಗೆ ಸಮುದ್ರದಲ್ಲಿ ಜೀವ ಪಣಕ್ಕಿಟ್ಟು ಹೋರಾಡಿ ಸಮುದ್ರದಲ್ಲಿ ಮಡಿದ ಜೀವವನ್ನೇ ನಂಬಿಕೊಂಡಿದ್ದ ಕುಟುಂಬಕ್ಕೆ ಸರಕಾರ ಗರಿಷ್ಟ ಪರಿಹಾರ ಧನ ಮಂಜೂರು ಮಾಡಿ ಅವರ ಜೀವನೋಪಾಯಕ್ಕೆ ಸಹಾಯ ಮಾಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ನಾನು ಮೀನುಗಾರಿಕೆ ಸಚಿವನಾಗಿದ್ದ ಸಂದರ್ಭ ಇಂಥ ಪರಿಸ್ಥಿತಿಯಲ್ಲಿ ಸಂತ್ರಸ್ತರಾದ ಕುಟುಂಬದವರ ನೆರವಿಗೆ ನೀಡುತ್ತಿದ್ದ 2 ಲಕ್ಷ ರೂ. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು 6 ಲಕ್ಷ ರೂ.ಗೆ ಹೆಚ್ಚಿಸಿದ್ದುದಾಗಿ ಸ್ಮರಿಸಿದ ಪ್ರಮೋದ್ ಮಧ್ವರಾಜ್, ಪ್ರಸ್ತುತ ಮತ್ಸ್ಯಕ್ಷಾಮ ಮತ್ತು ಕೋರೊನಾ ಲಾಕೌ ಡೌನ್ ನಂಥ ಪರಿಸ್ಥಿತಿಯಲ್ಲಿ ಸಂಪೂರ್ಣ ನೆಲಕಚ್ಚಿರುವ ಉದ್ಯಮಗಳಲ್ಲಿ ಮೀನುಗಾರಿಕೆಯೂ ಒಂದು. ಮೀನುಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮತ್ತು ಅನುದಾನ ಬಿಡುಗಡೆ ಜೊತೆಗೆ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಮೊತ್ತವನ್ನು ಇನ್ನು ಮಂದೆ ಕನಿಷ್ಟ 10 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ವಿನಂತಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!