Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಶೀಘ್ರ ಮೀನುಗಾರಿಕೆ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಕಾರ

ಶೀಘ್ರ ಮೀನುಗಾರಿಕೆ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಕಾರ

ಉಡುಪಿ: ಮುಂದಿನ ಎರಡು ವರ್ಷದಲ್ಲಿ ಕರ್ನಾಟಕದ ಮೀನುಗಾರಿಕೆ ಉದ್ಯಮದಲ್ಲಿ ಪ್ರಧಾನಿ ಮೋದಿ ಕನಸಿನ ಮೇಕ್ ಇನ್ ಇಂಡಿಯಾ ಕನಸು ಸಾಕಾರಗೊಳ್ಳುವ ಮೂಲಕ ಸ್ವಾವಲಂಬನೆ ಸಾಧ್ಯವಾಗಲಿದೆ ಎಂದು ಮೀನುಗಾರಿಕೆ, ಬಂದರು ಒಳನಾಡು ಸಾರಿಗೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ನವೀಕೃತ ಉಚ್ಚಿಲ ಶಾಖೆ ಉದ್ಘಾಟನೆ ಮತ್ತು ನೂತನ ಎ.ಟಿ.ಎಮ್. ಸೇವೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈವರೆಗೆ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆಗೆ ಉಪಯೋಗಿಸುವ ದೋಣಿಗಳಿಗೆ 95 ಶೇ. ಚೀನಾ ನಿರ್ಮಿತ ಹಾಗೂ 2 ಶೇ. ಜಪಾನ್ ನಿರ್ಮಿತ ಎಂಜಿನ್ ಗಳನ್ನು ಬಳಸಲಾಗುತ್ತಿತ್ತು. ಅದನ್ನು ಸಂಪೂರ್ಣವಾಗಿ ನಿಷೇಧಿಸಿ ಭಾರತ ನಿರ್ಮಿತ ಎಂಜಿನ್ ಅಳವಡಿಸುವ ನಿಟ್ಟಿನಲ್ಲಿ ದೇಶದ 8 ಉನ್ನತ ಕಂಪೆನಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮುಂದಿನ 3 ತಿಂಗಳಿನಲ್ಲಿ ಈ ನಿಟ್ಟಿನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು.

ಅನೇಕ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಹೆಜಮಾಡಿ ಬಂದರಿಗೆ ಅನುಮೋದನೆ ದೊರೆತು ಟೆಂಡರ್ ಪ್ರಕ್ರಿಯೆ ಮುಗಿದಿದೆ. 181 ಕೋ. ರೂ. ಯೋಜನೆಗೆ ಈ ತಿಂಗಳ ಅಂತ್ಯದಲ್ಲಿ ಮುಖ್ಯಮಂತ್ರಿಯಿಂದ ಶಿಲಾನ್ಯಾಸ ನಡೆಸಲಾಗುವುದು ಎಂದರು.

ಅಭ್ಯಾಗತರಾಗಿದ್ದ ಅಂಬಲಪಾಡಿ ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಮಾತನಾಡಿ. ಕೋ- ಆಪರೇಟಿವ್ ಬ್ಯಾಂಕುಗಳು ಬಡ ಮೀನುಗಾರರೂ ಸೇರಿದಂತೆ ಶ್ರಮಿಕ ವರ್ಗದವರಿಗೆ ಉತ್ತಮ ಸೇವೆ ನೀಡುತ್ತಿದ್ದು, ಅಂಥ ಬ್ಯಾಂಕುಗಳ ಸದಸ್ಯರಿಗೆ ಸಿಗುವ ಪಾಲು ಮುನಾಫೆ (ಡಿವಿಡೆಂಡ್)ಯನ್ನು ಈ ಬಾರಿ ರಿಸರ್ವ್ ಬ್ಯಾಂಕ್ ಸೂಚನೆಯಂತೆ ನಿಲ್ಲಿಸಲಾಗಿದೆ. ಕೂಡಲೇ ಅದನ್ನು ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಸಂಸದೆ ಶೋಭಾ ಅವರನ್ನು ವಿನಂತಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೋ- ಆಪರೇಟಿವ್ ಬ್ಯಾಂಕುಗಳ ಸದಸ್ಯರಿಗೆ ನೀಡಲಾಗುವ ಡಿವಿಡೆಂಡ್ ನ್ನು ರಿಸರ್ವ್ ಬ್ಯಾಂಕ್ ನಿಲ್ಲಿಸಿಲ್ಲ. ಬದಲಾಗಿ ಕೊರೋನಾ ಹಿನ್ನೆಲೆಯಲ್ಲಿ ಬ್ಯಾಂಕುಗಳಲ್ಲಿ ಠೇವಣಿ ಮೊತ್ತ ಕಡಿಮೆಯಾಗದಂತೆ ಎಚ್ಚರಿಕೆ ವಹಿಸುವ ಸಲುವಾಗಿ ತಡೆಹಿಡಿಯಲಾಗಿದ್ದು, ಮುಂದಿನ ವರ್ಷದಲ್ಲಿ ಎರಡು ವರ್ಷದ ಡಿವಿಡೆಂಡನ್ನು ಒಟ್ಟಿಗೇ ನೀಡಲಾಗುತ್ತದೆ. ಈ ಬಗ್ಗೆ ಗ್ರಾಹಕರಲ್ಲಿ ಗೊಂದಲ ಬೇಡ ಎಂದರು.

ಮಂಗಳೂರಿನ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಕೋ- ಆಪರೇಟಿವ್ ಸೊಸೈಟಿ ಹಾಗೂ ಬ್ಯಾಂಕುಗಳಿಗೆ ಕೇಂದ್ರ ಸರಕಾರ ಆದಾಯ ತೆರಿಗೆ ವಿಧಿಸಿದ್ದು, ಅದರಿಂದ ಸಮಸ್ಯೆಯಾಗುತ್ತಿದೆ. ಕೂಡಲೇ ಅದನ್ನು ರದ್ದುಗೊಳಿಸಬೇಕು. ವಾಣಿಜ್ಯ ಬ್ಯಾಂಕುಗಳಿಗಿಂತ ಕೋ- ಆಪರೇಟಿವ್ ಬ್ಯಾಂಕುಗಳು ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಸರಕಾರಗಳು ಅವುಗಳ ಅಭಿವೃದ್ಧಿಗೆ ಹೆಚ್ಚು ಗಮನಹರಿಸಬೇಕು ಎಂದರು.

ಕಾಪು ಪುರಸಭೆ ನೂತನ ಅಧ್ಯಕ್ಷ ಅನಿಲ್ ಕುಮಾರ್, ಕಾಪು ತಾ. ಪಂ. ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಕಾಪು ಯೋಜನಾ ಪ್ರಾಧಿಕಾರ ಅಧ್ಯಕ್ಷ ಸುಧಾಮ ಶೆಟ್ಟಿ, ಉಚ್ಚಿಲ ಮಹಾಲಕ್ಷ್ಮೀ ದೇವಳದ ಹಿರಿಯ ಅರ್ಚಕ ವೆಂಕಟ ನರಸಿಂಹ ಉಪಾಧ್ಯಾಯ, ಶ್ರೇಷ್ಠ ಮೀನುಗಾರ ಪ್ರಶಸ್ತಿ ಪುರಸ್ಕೃತ ಹಿರಿಯ ಮೀನುಗಾರ ರಾಮ ಕಾಂಚನ್, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಣಾಮ್ ಕೆ. ಸಾಲ್ಯಾನ್ ಮತ್ತು ಶ್ರೇಯಾ ಬಿ. ಕುಂದರ್ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದ ಸಾಲ ವಿತರಣೆ, ರಾಜ್ಯ ಸರಕಾರದ ಬಡವರ ಬಂಧು ಯೋಜನೆ ಸಹಾಯಧನ ಹಸ್ತಾಂತರಿಸಲಾಯಿತು.

ನವೀಕೃತ ಶಾಖೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ್ ಕಾಶೀನಾಥ ಮರಾಠೆ ಉದ್ಘಾಟಿಸಿದರು. ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರಬಾಬು, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಉದ್ಯಮಿ ಆನಂದ ಪಿ. ಸುವರ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಎಚ್.ಡಿ.ಎಫ್.ಸಿ ಬ್ಯಾಂಕಿನ ಕ್ಲಸ್ಟರ್ ಹೆಡ್ ಚಿದಾನಂದ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರೆ ಮತ್ತು ಶಿಲ್ಪಾ ಜಿ. ಸುವರ್ಣ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಇದ್ದರು.

ತುಳು ಭಾಷೆಗೆ ವಿಶೇಷ ಮಾನ್ಯತೆ ನೀಡುವ ನಿಟ್ಟಿನಲ್ಲಿ ಬ್ಯಾಂಕಿನಲ್ಲಿ ತುಳು ಲಿಪಿಯಲ್ಲಿ ಅಳವಡಿಸಲಾದ ನಾಮಫಲಕವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಅನಾವರಣಗೊಳಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!