Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮೀನಿಗೆ ಫಾರ್ಮಾಲಿನ್ ಬಳಕೆ: ಮಿಥ್ಯಾರೋಪ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಮೀನಿಗೆ ಫಾರ್ಮಾಲಿನ್ ಬಳಕೆ: ಮಿಥ್ಯಾರೋಪ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಉಡುಪಿ: ಜಿಲ್ಲೆಯಲ್ಲಿ ಮಾರಾಟವಾಗುತ್ತಿರುವ ಮೀನಿಗೆ ಫಾರ್ಮಾಲಿನ್ ಎಂಬ ಅಪಾಯಕಾರಿ ರಾಸಾಯನಿಕ ಬಳಕೆಯಾಗುತ್ತಿದೆ ಎಂದು ಸುಳ್ಳು ಆರೋಪ ಮಾಡಿ ದೂರು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದ.ಕ. ಮೀನು ಮಾರಾಟ ಫೆಡರೇಶನ್ ಮತ್ತು ಮಲ್ಪೆ ಮೀನುಗಾರ ಸಂಘ ಬುಧವಾರ ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದೆ.

ಆಧಾರ ರಹಿತ ದೂರು ನೀಡಿ ಮತ್ಸ್ಯ ಪ್ರಿಯರಲ್ಲಿ ಗೊಂದಲ ಮೂಡಿಸಿದಂತಾಗಿದೆ. ಮಲ್ಪೆ ಬಂದರು ಅಥವಾ ಅಧಿಕೃತವಾಗಿ ಮಹಿಳಾ ಮಾರಾಟಗಾರರಿಂದ ಇದುವರೆಗೆ ಇಂಥ ಯಾವುದೇ ಸಮಸ್ಯೆ ಉಂಟಾಗಿಲ್ಲ. ಅನಧಿಕೃತವಾಗಿ ಮೀನು ಮಾರಾಟ ಮಾಡುವ ಸ್ಟಾಲ್ ಗಳಲ್ಲಿ ಫಾರ್ಮಾಲಿನ್ ಬಳಕೆಯಾಗಿದ್ದರೆ ಅದಕ್ಕೆ ಮೀನುಗಾರರು ಜವಾಬ್ದಾರರಲ್ಲ. ಈ ರೀತಿ ಆಧಾರ ರಹಿತ ಸುಳ್ಳು ಹೇಳಿಕೆಯಿಂದಾಗಿ ಕೋಟ್ಯಾಂತರ ರೂ. ವ್ಯವಹಾರದ ಮೀನುಗಾರಿಕೆ ಉದ್ಯಮಕ್ಕೆ ಹೊಡೆತ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು, ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ವಿವಿಧ ಮೀನುಗಾರ ಸಂಘಟನೆಗಳ ಪ್ರಮುಖರಾದ ಯಶ್ಪಾಲ ಎ. ಸುವರ್ಣ, ರಮೇಶ್ ಕೋಟ್ಯಾನ್, ಕಿಶೋರ್. ಡಿ. ಸುವರ್ಣ, ಸುಭಾಸ್ ಮೆಂಡನ್, ರಾಮಚಂದ್ರ ಕುಂದರ್, ಜಯ ಸಿ. ಕೋಟ್ಯಾನ್, ದಯಾನಂದ ಸುವರ್ಣ, ರತ್ನಾಕರ ಸಾಲ್ಯಾನ್, ವಿನಯ ಕರ್ಕೇರ ಮೊದಲಾದವರಿದ್ದರು.

ಎಚ್ಚರಿಕೆಯಿಂದ ವ್ಯವಹರಿಸಿ
ಕೆಲವೊಂದು ಅನಧಿಕೃತ ಸ್ಟಾಲ್ ಗಳಲ್ಲಿ ಮೀನು ಮಾರಾಟ ಮಾಡಲಾಗುತ್ತಿದ್ದು ಅಲ್ಲಿ ಇಂಥ ಪ್ರಕರಣ ನಡೆಯುವ ಸಾಧ್ಯತೆ ಇದೆ. ಅಲ್ಲಿ ಲಭಿಸುವ ಮೀನಿನ ಸುರಕ್ಷತೆ, ತಾಜಾತನ, ಗುಣಮಟ್ಟ ವಿಷಯದಲ್ಲಿ ಗ್ರಾಹಕರು ಜಾಗರೂಕತೆಯಿಂದ ವ್ಯವಹರಿಸಬೇಕು. ಕಾನೂನು ಬಾಹಿರವಾಗಿ ಕಾರ್ಯಾಚರಿಸುತ್ತಿರುವ ಮೀನಿನ ಸ್ಟಾಲ್ ಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಯಶಪಾಲ್ ಸುವರ್ಣ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!