ಸುದ್ದಿಕಿರಣ ವರದಿ
ಶನಿವಾರ, ಮೇ 7
ದೇಶ ಮುನ್ನಡೆಸುವ ಶಕ್ತಿ ಮೋದಿ ಮತ್ತು ಬಿಜೆಪಿಗೆ ಮಾತ್ರ
ಬೆಂಗಳೂರು: ದೇಶವನ್ನು ಯಶಸ್ವಿಯಾಗಿ ಮುನ್ನಡೆಸುವ ಶಕ್ತಿ ಇರುವ ಏಕೈಕ ವ್ಯಕ್ತಿ ನರೇಂದ್ರ ಮೋದಿ ಮತ್ತು ಬಿಜೆಪಿ ಆಗಿದೆ ಎಂದು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ನನ್ನ ಬದುಕಿನಲ್ಲಿ ಹೊಸ ಪರ್ವ ಶುರುವಾಗಿದೆ. ಇಂದು ದೇಶದಲ್ಲಿ ಒನ್ ನೇಶನ್ ಒನ್ ಟ್ಯಾಕ್ಸ್, ಒನ್ ನೇಶನ್ ಒನ್ ರೇಶನ್ ಅದರಂತೆ ದೇಶದಲ್ಲಿ ಒನ್ ನೇಶನ್ ಒನ್ ಲೀಡರ್, ಒನ್ ಪಾರ್ಟಿ ಹಂತಕ್ಕೆ ತಲುಪಿದೆ. ನರೇಂದ್ರ ಮೋದಿ ಮತ್ತು ಬಿಜೆಪಿ, ದೇಶವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಇಂದು ದೇಶದ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮೇಲೆ ವಿಶ್ವಾಸವಿರಿಸಿ ಯಾವುದೇ ಶರ್ತಗಳಿಲ್ಲದೆ ಸೇರ್ಪಡೆಗೊಂಡಿದ್ದು, ಬಿಜೆಪಿಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ನಮ್ಮ ಸಂಪೂರ್ಣ ಶ್ರಮವನ್ನು ಪ್ರಾಮಾಣಿಕವಾಗಿ ವಿನಿಯೋಗಿಸಲಾಗುವುದು ಎಂದರು.
ಮೋದಿ ಪ್ರಬಲ ನಾಯಕ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮಧ್ವರಾಜ್, ದೇಶದ ಪ್ರಧಾನಿ ನರೇಂದ್ರ ಮೋದಿ ಕೈಗಳನ್ನು ಬಲಪಡಿಸುವುದು ಇಡೀ ದೇಶದ ಜನರ ಜವಾಬ್ದಾರಿ. ಇಂದು 130 ಕೋಟಿ ಜನರ ದೇಶ ಒಂದಾಗಿ ನಡೆಯಬೇಕಾದರೆ ದೇಶಕ್ಕೆ ಒಂದು ಪ್ರಬಲ ನಾಯಕತ್ವ ಮತ್ತು ಪಕ್ಷದ ಅಗತ್ಯವಿದೆ. ಈ ದೇಶದಲ್ಲಿ ಪ್ರಬಲ ನಾಯಕ ಎಂಬುದು ಇದ್ದರೆ ಅದು ನರೇಂದ್ರ ಮೋದಿ ಎಂದು ನಿಸ್ಸಂದೇಹವಾಗಿ ಹೇಳಬಹುದು ಎಂದರು.
ನಾನು ನರೇಂದ್ರ ಮೋದಿಯವರನ್ನು 20-20-20 ಎಂದು ಕರೆಯಲು ಇಷ್ಟಪಡುತ್ತೇನೆ. ನಮ್ಮ ಬಾಯಲ್ಲಿ ಯಾವತ್ತೂ ಇರುವುದು 20-20 ಮಾತ್ರ. ಆದರೆ, ನಾನು ಇವತ್ತು 20-20-20 ಎಂದು ಹೇಳುತ್ತೇನೆ. ಕಾರಣ 20 ವರ್ಷ ಅವರ ಜೀವನವನ್ನು ಆರ್.ಎಸ್.ಎಸ್.ನಲ್ಲಿ ಕಳೆದು ಜನಸಾಮಾನ್ಯರು ಹಾಗೂ ತಳಮಟ್ಟದ ಸಮಸ್ಯೆಗಳ ಅನುಭವ ಪಡೆದುಕೊಂಡರು. ಮತ್ತೊಂದು 20 ವರ್ಷ ಅವರು ಭಾರತೀಯ ಜನತಾ ಪಕ್ಷದ ನೇತೃತ್ವ ವಹಿಸಿ ಪಕ್ಷ ಮತ್ತು ಚುನಾವಣೆ ನಡೆಸುವುದನ್ನು ತೋರಿಸಿಕೊಟ್ಟರು. ಮತ್ತೊಂದು 20 ವರ್ಷ ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಆಡಳಿತ ಮಾಡುವ ಬಗೆಯನ್ನು ತೋರಿಸಿದ್ದಾರೆ. ಅಂಥ ಮೋದಿಯವರ ಕೈಗಳನ್ನು ಬಲಪಡಿಸುವುದು ಇಡೀ ದೇಶದ ಜನರ ಜವಾಬ್ದಾರಿ ಎಂದು ಪ್ರಮೋದ್ ಹೇಳಿದರು.
2023ರಲ್ಲಿ ಮತ್ತೆ ರಾಜ್ಯದಲ್ಲಿ 150ಕ್ಕೂ ಅಧಿಕ ಸ್ಥಾನದೊಂದಿಗೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ನನ್ನ ಅಳಿಲ ಸೇವೆ ಸಲ್ಲಿಸಲು ನಾನು ಈ ಪಕ್ಷಕ್ಕೆ ಸೇರಿದ್ದೇನೆ ಎಂದರು.