Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಗ್ಯಾಸ್ ಪ್ಲಾಂಟ್ ನಲ್ಲಿ ಅನಿಲ ಸೋರಿಕೆ, ಕ್ರಿಪ್ರ ಕಾರ್ಯಾಚರಣೆ; ತಪ್ಪಿದ ಭಾರೀ ಅನಾಹುತ! - ಇದು...

ಗ್ಯಾಸ್ ಪ್ಲಾಂಟ್ ನಲ್ಲಿ ಅನಿಲ ಸೋರಿಕೆ, ಕ್ರಿಪ್ರ ಕಾರ್ಯಾಚರಣೆ; ತಪ್ಪಿದ ಭಾರೀ ಅನಾಹುತ! – ಇದು ರಾಸಾಯನಿಕ ವಿಪತ್ತು ನಿರ್ವಹಣೆ ಅಣುಕು ಪ್ರದರ್ಶನ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ಗ್ಯಾಸ್ ಪ್ಲಾಂಟ್ ನಲ್ಲಿ ಅನಿಲ ಸೋರಿಕೆ, ಕ್ರಿಪ್ರ ಕಾರ್ಯಾಚರಣೆ; ತಪ್ಪಿದ ಭಾರೀ ಅನಾಹುತ!
ಇದು ರಾಸಾಯನಿಕ ವಿಪತ್ತು ನಿರ್ವಹಣೆ ಅಣುಕು ಪ್ರದರ್ಶನ
ಹಿರಿಯಡಕ: ಇಲ್ಲಿನ ಸಮೀಪದ ಕುದಿ ಗ್ರಾಮದ ಜನತೆಗೆ ಶುಕ್ರವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ತೀವ್ರ ಉಸಿರಾಟದ ತೊಂದರೆ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ ತೀವ್ರ ಆತಂಕದಲ್ಲಿದ್ದರು!

ಘಟನೆಗೆ ಕಾರಣ, ಆ ಗ್ರಾಮದ ಎ.ಜಿ.ಎಸ್. ಎಲ್.ಪಿಜಿ ಇಂಡಸ್ಟ್ರಿಯಲ್ಲಿ ಸಂಭವಿಸಿದ ಅನಿಲ ಸೋರಿಕೆ!!
ಇಂದು ಬೆಳಗ್ಗೆ 8.50ಕ್ಕೆ ಕುದಿ ಗ್ರಾಮದಲ್ಲಿರುವ ಎ.ಜಿ.ಎಸ್ ಎಲ್.ಪಿಜಿ ಇಂಡಸ್ಟ್ರಿಯಲ್ಲಿ ಅನಿಲ ಸೋರಿಕೆ ಕಂಡುಬಂದಿದ್ದು, ತಕ್ಷಣ ಅಲ್ಲಿನ ಸಿಬ್ಬಂದಿ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಉಚಿತ ದೂರವಾಣಿ ಸಂಖ್ಯೆ 1077ಗೆ 8.53ಕ್ಕೆ ಮಾಹಿತಿ ನೀಡಿದರು.

ಕೂಡಲೇ ಪ್ಲಾಂಟ್ ನಲ್ಲಿನ ಅಪಾಯದ ಸೈರನ್ ಮೊಳಗಿಸಿ, 2 ನಿಮಿಷದೊಳಗೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಸಿಬ್ಬಂದಿಗಳು ಪ್ಲಾಂಟ್ ನ ಅಸೆಂಬ್ಲಿ ಪಾಯಿಂಟ್ ನಲ್ಲಿ ಸೇರಿ, ಸ್ಪೀಕರ್ ಮೂಲಕ ಮೂಲಕ ಘಟನೆ ಬಗ್ಗೆ ಸ್ಥಳೀಯ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಬೆಳಗ್ಗೆ 9.17ರ ವೇಳೆಗೆ ಉಡುಪಿಯಿಂದ ಅಗ್ನಿಶಾಮಕ ದಳದ ವಾಹನಗಳು ಘಟನಾ ಸ್ಥಳಕ್ಕೆ ಆಗಮಿಸಿ, ಅಗ್ನಿಶಾಮಕ ವಾಹನದಿಂದ ಒಂದೆಡೆ ನೀರು ಸಿಂಪಡಿಸಿದರೆ, ಎ.ಜಿ.ಎಸ್ ಸಿಬ್ಬಂದಿಗಳು ತಮ್ಮ ಪ್ಲಾಂಟ್ ನ ಸುರಕ್ಷತೆಗೆ ನಿರ್ಮಿಸಿರುವ ಟ್ಯಾಂಕ್ ನಿಂದ ನೀರು ಸಿಂಪಡಿಸುವ ಮೂಲಕ ಪ್ಲಾಂಟಿನ ತಾಪಮಾನ ಕಡಿಮೆಗೊಳಿಸಿ, ಅನಿಲ ಸೋರುವಿಕೆಯನ್ನು ನಿಯಂತ್ರಣಕ್ಕೆ ತರುವಲ್ಲಿ ತೊಡಗಿ, 9.50ರ ವೇಳೆಗೆ ಸೋರಿಕೆ ನಿಯಂತ್ರಣಕ್ಕೆ ತಂದರು.

ಬೆಳಿಗ್ಗೆ 9.20ರ ವೇಳೆಗೆ 3 ಆ್ಯಂಬುಲೈನ್ಸ್ ಗಳು ಸ್ಥಳಕ್ಕೆ ಆಗಮಿಸಿದ್ದು, ತೀವ್ರ ಉಸಿರಾಟದ ಸಮಸ್ಯೆಗೊಳಗಾದವರು ಮತ್ತು ಅಸ್ವಸ್ಥರಾದವರನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ಭಾಗಿಯಾದರೆ, ಆ ಕ್ಷಣದಲ್ಲಿ ಆಗಮಿಸಿದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದವರನ್ನು ಉನ್ನತ ಮಟ್ಟದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದರು.

ಪ್ರಕರಣದ ಮಾಹಿತಿ ತಿಳಿದ ತಕ್ಷಣ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳದ ಸಮೀಪಕ್ಕೆ ಜನರು ಹೋಗದಂತೆ ಪ್ರತಿಬಂಧಿಸಿ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿದರು.

ಆಪದ್ ಮಿತ್ರ ಸಿಬ್ಬಂದಿ, ಗೃಹ ರಕ್ಷಕ ದಳದವರು, ಸ್ಥಳೀಯ ಸ್ವಯಂಸೇವಕರು, ಸಿಬ್ಬಂದಿ ಗ್ರಾಮದ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ತೀವ್ರ ತೊಂದರೆಗೊಳಗಾದವರನ್ನು ಆ್ಯಂಬುಲೆನ್ಸ್ ಗಳಿಗೆ ಶಿಫ್ಟ್ ಮಾಡಿದರು. ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸಿಬ್ಬಂದಿ ಅನುವು ಮಾಡಿಕೊಟ್ಟಿತು. ಘಟನಾ ಸ್ಥಳದ ಇನ್ಸಿಡೆಂಟ್ ಅಬ್ಸರ್ವರ್ ಗಳು ಕ್ಷಣ ಕ್ಷಣದ ಮಾಹಿತಿ ಪಡೆಯುವುದರೊಂದಿಗೆ ರಕ್ಷಣಾ ಕಾರ್ಯದ ಮುನ್ಸೂಚನೆಗಳನ್ನು ನೀಡುತ್ತಿದ್ದರು.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಏಜಿಸ್ ಸಂಸ್ಥೆ ಸಿಬ್ಬಂದಿಗಳು ಅನಿಲ ಸೋರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ ಬಳಿಕ ಪ್ಲಾಂಟ್ ಸುರಕ್ಷಿತವಾಗಿರುವ ಕುರಿತಂತೆ 10.30ಕ್ಕೆ ತಮ್ಮ ವರದಿ ನೀಡಿದರು. ಗ್ಯಾಸ್ ಪ್ಲಾಂಟ್ ನ ಸುತ್ತಮುತ್ತಲಿನ ಪ್ರದೇಶದ ಜನರನ್ನು ಸುರಕ್ಷತಾ ಸ್ಥಳಗಳಿಗೆ ರವಾನಿಸಿರುವ ಬಗ್ಗೆ ಹಾಗೂ ತೊಂದರೆಗೊಳಗಾದ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ರವಾನಿಸಿರುವ ಬಗ್ಗೆ ಮಾಹಿತಿ ಪಡೆದ ಬಳಿಕ ಅಣಕು ಪ್ರದರ್ಶನ ಮುಕ್ತಾಯಗೊಳಿಸಲಾಯಿತು.

ಕೇಂದ್ರದ ಸೂಚನೆಯಂತೆ ಪ್ರದರ್ಶನ
ಇದು ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆಯಂತೆ ಶುಕ್ರವಾರ ಜಿಲ್ಲೆಯಲ್ಲಿ ನಡೆಸಿದ ರಾಸಾಯನಿಕ ವಿಪತ್ತು ನಿರ್ವಹಣೆ ಕುರಿತ ಅಣಕು ಪ್ರದರ್ಶನ.

ಈ ಕಾರ್ಯಾಚರಣೆಯ ಸಾಧಕ ಬಾಧಕಗಳ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲೆಯಲ್ಲಿ ಸಂಭವಿಸಬಹುದಾದ ಯಾವುದೇ ಬಗೆಯ ವಿಪತ್ತುಗಳಿಗೆ ತಕ್ಷಣ ಸ್ಪಂದಿಸಿ ಅಗತ್ಯ ತುರ್ತು ರಕ್ಷಣಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.

ಯಾವುದೇ ವಿಪತ್ತು ಸಂಭವಿಸಿದಾಗ ಜಿಲ್ಲಾಡಳಿತ ಟೋಲ್ ಫ್ರೀ ಸಂ. 1077ಗೆ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ, ಸಂಬಂಧಪಟ್ಟ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ತಕ್ಷಣ ಘಟನೆ ಸಂಭವಿಸಿದ ಸ್ಥಳಕ್ಕೆ ಹಾಜರಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಜೀವ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಲಿದ್ದಾರೆ ಎಂದರು.

ಲಭಿಸಿದ ಸಹಕಾರ
ಇಂದು ನಡೆದ ಅಣಕು ಕಾರ್ಯಾಚರಣೆ ಮೂಲಕ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೈಜ ಚಿತ್ರಣ ದೊರೆತಿದೆ. ಅಣಕು ಕಾರ್ಯಾಚರಣೆಯಾದರೂ ಎಲ್ಲಾ ಸಿಬ್ಬಂದಿಗಳು ಅತ್ಯಂತ ಕ್ಷಿಪ್ರ ಗತಿಯಲ್ಲಿ ಸ್ಪಂದಿಸಿ, ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯಾಡಳಿತಗಳು ಮತ್ತು ಸಾರ್ವಜನಿಕರೂ ಅಗತ್ಯ ಸಹಕಾರ ನೀಡಿದ್ದು, ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಕಾರ್ಯದಲ್ಲಿ ತೊಡಗಿಕೊಳ್ಳಲು ಆಪದ್ ಮಿತ್ರ ಸ್ವಯಂಸೇವಕರ ತಂಡವೂ ಸಿದ್ಧವಾಗಿದೆ ಎಂದರು.

ನಿರ್ವಹಣೆಯಲ್ಲಿ ನೈಜತೆ
ಕಾರ್ಯಕ್ರಮದಲ್ಲಿ ಇನ್ಸಿಡೆಂಟ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ. ಎನ್., ಅನಿಲ ಸೋರಿಕೆ ದುರಂತ ಅಣುಕು ಪ್ರದರ್ಶನವಾಗಿದ್ದರೂ ಸ್ಥಳೀಯ ಜನರು, ಇಲ್ಲಿನ ಸ್ವಯಂ ಸೇವಕರು, ಜಿಲ್ಲಾಡಳಿತದ ಸಿಬ್ಬಂದಿಗಳು ದುರಂತ ಸಂಭವಿಸಿದೆ ಎಂಬ ರೀತಿಯಲ್ಲಿ ತಮ್ಮ ಕರ್ತವ್ಯ ಪಾಲಿಸಿದ್ದಾರೆ ಎಂದರು.

ದುರಂತ ಸಂಭವಿಸಿದ ಸ್ಥಳದ ನೈಸರ್ಗಿಕ ಪರಿಸ್ಥಿತಿ ಅರಿತು ಕಾರ್ಯಾಚರಣೆ ಮಾಡಿದಲ್ಲಿ ವಿಕೋಪ ಹತೋಟಿಗೆ ತರಲು ಸಾಧ್ಯ. ಅಲ್ಲಿನ ಗಾಳಿ ಬೀಸುವಿಕೆಯ ದಿಕ್ಕು, ಘಟನಾ ಸ್ಥಳಕ್ಕೆ ಹೋಗುವ ರಸ್ತೆ, ಸ್ಥಳೀಯ ಜನರ ಸುತ್ತಮುತ್ತ ಮನೆಗಳ ಗುರುತಿಸುವಿಕೆ ಸೇರಿದಂತೆ ಇತರ ಮಾಹಿತಿಗಳಿಂದ ದುರಂತ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಲು ಸಾಧ್ಯ ಎಂದರು.

ಕುದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಶೆಟ್ಟಿ, ಉಪಾಧ್ಯಕ್ಷ ಸದಾನಂದ ಪ್ರಭು ಹಾಗೂ ಪೊಲೀಸ್, ಅಗ್ನಿಶಾಮಕ, ಗೃಹ ರಕ್ಷಕ, ಆರೋಗ್ಯ, ಕೈಗಾರಿಕೆ, ಫ್ಯಾಕ್ಟರ್ ಮತ್ತು ಬಾಯ್ಲರ್ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು, ಎಜಿಸ್ ಎಲ್.ಪಿಜಿ ಇಂಡಸ್ಟ್ರಿ ಮ್ಯಾನೇಜರ್ ರಂಗನಾಥ್ ಹಾಗೂ ಸಿಬ್ಬಂದಿಗಳು, ಆಪದ್ ಮಿತ್ರ ಸ್ವಯಂ ಸೇವಕರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!