Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮುಸ್ಲಿಂ ಒಕ್ಕೂಟ ರತ್ನ ಪ್ರಶಸ್ತಿಗೆ ಆಯ್ಕೆ

ಮುಸ್ಲಿಂ ಒಕ್ಕೂಟ ರತ್ನ ಪ್ರಶಸ್ತಿಗೆ ಆಯ್ಕೆ

ಮುಸ್ಲಿಂ ಒಕ್ಕೂಟ ರತ್ನ ಪ್ರಶಸ್ತಿಗೆ ಆಯ್ಕೆ
ಸುದ್ದಿಕಿರಣ ವಾರ್ತೆ
ಉಡುಪಿ. ಜ. 4: ಮಾನವೀಯ ಮೌಲ್ಯಗಳಿಗಾಗಿ ಹೋರಾಡುವ ವ್ಯಕ್ತಿ ಹಾಗೂ ಸಮಾಜಸೇವೆಯಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಜಿಲ್ಲೆಯ ವ್ಯಕ್ತಿಗಳಿಗೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ನೀಡುವ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮಾನವರತ್ನ ಪ್ರಶಸ್ತಿ ಹಾಗೂ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸೇವಾರತ್ನ ಪ್ರಶಸ್ತಿಗೆ ಅನುಕ್ರಮವಾಗಿ ಸಾಹಿತಿ ಮತ್ತು ಮಾನವ ಹಕ್ಕು ಹೋರಾಟಗಾರ ಜಿ. ರಾಜಶೇಖರ್ ಹಾಗೂ ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ತೋನ್ಸೆ ಆಯ್ಕೆಯಾಗಿದ್ದಾರೆ.

ಈ ಚೊಚ್ಚಲ ಪ್ರಶಸ್ತಿ 25 ಸಾವಿರ ರೂ. ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ. ಈ ತಿಂಗಳ 9ರಂದು ಸಂಜೆ 6.15ಕ್ಕೆ ಅಂಬಾಗಿಲು ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಸೋಮವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸ್ನೇಹ ಸಮಾವೇಶ, ಸಾಧಕರಿಗೆ ಸಂಮಾನ
ಇದೇ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಕಾರ್ಯಕ್ರಮ ನಡೆಯಲಿದೆ.

ಸಮಾವೇಶದಲ್ಲಿ ಜಿಲ್ಲೆಯ 9 ಮಂದಿ ಹಿರಿಯ ಸಾಧಕರಾದ ಕ್ರೈಸ್ತ ಧರ್ಮಗುರು ಹಾಗೂ ಸಾಮಾಜಿಕ ಹೋರಾಟಗಾರ ಫಾ| ವಿಲಿಯಮ್ ಮಾರ್ಟಿಸ್, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಮತ್ಸೋದ್ಯಮಿ ಸಾಧು ಸಾಲಿಯಾನ್, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲದಾಸ್ ಬನ್ನಂಜೆ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಥಮ ಅಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ, ಆಶಾ ನಿಲಯ ವಿಶೇಷ ಶಾಲೆ ಮುಖ್ಯ ಶಿಕ್ಷಕಿ ಶಶಿಕಲಾ ಬೆಂಜಮಿನ್ ಕೋಟ್ಯಾನ್, ಕಾರ್ಕಳದ ಸಮಾಜಸೇವಕಿ ಆಯಿಶಾ ಕಾರ್ಕಳ ಹಾಗೂ ಕುಂದಾಪುರ ಕೋಡಿ ಸಮಾಜಸೇವಕಿ ಲಕ್ಷ್ಮೀಬಾಯಿ ಪೂಜಾರಿ ಅವರನ್ನು ಸನ್ಮಾನಿಸಲಾಗುವುದು.

ಪದ್ಮಶ್ರೀ ಹರೇಕಳ ಹಾಜಬ್ಬ ಸಮಾವೇಶ ಉದ್ಘಾಟಿಸಲಿದ್ದು, ವಾರ್ತಾ ಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅಧ್ಯಕ್ಷತೆ ವಹಿಸುವರು. ಹಂಪಿ ಕನ್ನಡ ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಡಾ| ಎಂ. ಚಂದ್ರ ಪೂಜಾರಿ ಮುಖ್ಯ ಭಾಷಣ ಮಾಡಲಿದ್ದು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಅಭಿನಂದನ ಭಾಷಣ ಮಾಡುವರು.

ರಾಜ್ಯ ಹಿಂದುಳಿದ ವರ್ಗ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್, ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ ಬೈಂದೂರು ಹಾಗೂ ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ ಶೆಣೈ ಅಭ್ಯಾಗತರಾಗಿ ಆಗಮಿಸುವರು.
ಒಕ್ಕೂಟದ ಮಾಜಿ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ನಾವುಂದ, ಕಾಸಿಮ್ ಬಾರ್ಕೂರು, ಎಂ.ಪಿ. ಮೊದಿನಬ್ಬ ಹಾಗೂ ಅಶ್ಫಾಕ್ ಅಹ್ಮದ್ ಕಾರ್ಕಳ ಉಪಸ್ಥಿತರಿರುವರು ಎಂದು ಯಾಸಿನ್ ತಿಳಿಸಿದರು.

ಒಕ್ಕೂಟ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಕೋಶಾಧಿಕಾರಿ ಇಕ್ಬಾಲ್ ಎಸ್. ಕಟಪಾಡಿ, ಕಾರ್ಯಕ್ರಮ ಸಂಚಾಲಕ ವಿ. ಎಸ್. ಉಮರ್, ಪತ್ರಿಕಾ ಕಾರ್ಯದರ್ಶಿ ಸಲಾಹುದ್ದೀನ್ ಅಬ್ದುಲ್ಲಾ ಪತ್ರಿಕಾಗೋಷ್ಟಿಯಲ್ಲಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!