Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ನಾಡು ನುಡಿ ಸೇವೆಗಾಗಿ ಸ್ಪರ್ಧೆ

ನಾಡು ನುಡಿ ಸೇವೆಗಾಗಿ ಸ್ಪರ್ಧೆ

ಉಡುಪಿ: ಮುಂದಿನ ಮೇ 9ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಕನ್ನಡ ನಾಡು ನುಡಿಯ ಸೇವೆ ಮಾಡುವ ಆಶಯದಿಂದ ಸೇವಾಕಾಂಕ್ಷಿಯಾಗಿ ಸ್ಪರ್ಧಿಸುತ್ತಿರುವುದಾಗಿ ನಾಡೋಜ ಡಾ| ಮಹೇಶ ಜೋಶಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮತದಾರರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಉನ್ನತ ಹುದ್ದೆಗಳಲ್ಲಿ ಅಧಿಕಾರ ಅನುಭವಿಸಿದ ಬಳಿಕ ಮತ್ತೆ ಅಧಿಕಾರದ ಆಸೆಯಿಂದ ಅಥವಾ ಪುನರ್ವಸತಿಗಾಗಿ ಸ್ಪರ್ಧಿಸುತ್ತಿಲ್ಲ ಎಂದವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 3.10 ಲಕ್ಷ ಕಸಾಪ ಮತದಾರರಿದ್ದು, ಬೆಂಗಳೂರಿನಲ್ಲಿ ಅತಿ ಹೆಚ್ಚು 36,389 ಮತದಾರರಿದ್ದರೆ, ಉಡುಪಿಯಲ್ಲಿ ಅತಿ ಕಡಿಮೆ 1,984 ಮತದಾರರಿದ್ದಾರೆ. ಈಗಾಗಲೇ 14 ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದು, ಚುನಾವಣೆಯೊಳಗೆ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುವುದಾಗಿ ತಿಳಿಸಿದರು.

ಸರ್ಕಾರವನ್ನು ಮೆಚ್ಚಿಸಲು ಬಲಪಂಥೀಯ ಸಾಹಿತಿಗಳ ಸಾಲಿಗೆ ಸೇರುವುದಿಲ್ಲ, ಜೊತೆಗೆ ಸಾಹಿತ್ಯ ಪರಿಷತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಎಡಪಂಥೀಯ ಸಾಹಿತಿಗಳ ಸಾಲಿಗೂ ಸೇರುವುದಿಲ್ಲ. ತನ್ನದು ಕನ್ನಡ ಪಂಥ ಎಂದ ಜೋಶಿ, ಅಧ್ಯಕ್ಷನಾಗಿ ಆಯ್ಕೆಯಾದ ಬಳಿಕ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತಾಗಿ ಬದಲಾಯಿಸುವ ಹಾಗೂ ಕನ್ನಡ ಶಾಲೆಗಳನ್ನು ಮುಚ್ಚದಂತೆ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಆಶ್ವಾಸನೆ ನೀಡಿದರು.

ಪ್ರತೀ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶ್ರಮಿಸುವುದಾಗಿ ತಿಳಿಸಿದರು.

ಕಾಪು ತಾಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ಪ್ರಮುಖರಾದ ಆರೂರು ತಿಮ್ಮಪ್ಪ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ, ಡಾ| ಮಂಜುನಾಥ ರೇವಣಕರ್, ನಾರಾಯಣ ಮಡಿ, ಯು. ವಿಶ್ವನಾಥ ಶೆಣೈ, ಪ್ರೊ. ಶಂಕರ್, ರವಿರಾಜ್ ಎಚ್. ಪಿ., ಭುವನಪ್ರಸಾದ್ ಹೆಗ್ಡೆ, ನಾಗರಾಜ್ ಹೆಬ್ಬಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!