Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ `ನಂಬಿದವರೇ ಬೆನ್ನಿಗೆ ಚೂರಿ ಹಾಕಿದರು'

`ನಂಬಿದವರೇ ಬೆನ್ನಿಗೆ ಚೂರಿ ಹಾಕಿದರು’

ಉಡುಪಿ: `ನಾನು ನಂಬಿದವರೇ ನನ್ನ ಬೆನ್ನಿಗೆ ಚೂರಿ ಹಾಕಿದರು. ಹಾಗಾಗಿ ಉದ್ಯಮದಲ್ಲಿ ಅಪಾರ ನಷ್ಟ ಅನುಭವಿಸಬೇಕಾಯಿತು. ಆದರೂ ನನ್ನ ಮೇಲಿನ ಎಲ್ಲ ಆರೋಪಗಳಿಂದ ಮುಕ್ತನಾಗುವ ವಿಶ್ವಾಸ ಇದೆ’ ಎಂದು ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ. ಆರ್. ಶೆಟ್ಟಿ ಹೇಳಿದರು.

ಇಲ್ಲಿನ ಕೂಸಮ್ಮ ಶಂಭು ಶೆಟ್ಟಿ ಮೆಮೊರಿಯಲ್ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ 10,000ನೇ ಮಗು ಜನನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನನ್ನ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿದ್ದ ವ್ಯಕ್ತಿಯನ್ನು ನಂಬಿ ಸಿ.ಎಫ್.ಒ, ಸಿಇಒ ಜವಾಬ್ದಾರಿ ನೀಡಿದೆ. ಆತ ನಂಬಿಕೆಗೆ ದ್ರೋಹ ಮಾಡಿದ. ಪ್ರಕರಣ ನ್ಯಾಯಾಲಯದಲ್ಲಿದ್ದು ಹೆಚ್ಚು ಮಾತನಾಡುವುದಿಲ್ಲ ಎಂದರು.

2018ರಲ್ಲಿ ಕಂಪೆನಿಯ ಒಟ್ಟು ಸಂಪತ್ತಿನ ಮೌಲ್ಯ 12.8 ಬಿಲಿಯನ್ ಡಾಲರ್ ಆಗಿತ್ತು. ನನ್ನ ಉದ್ಯಮದಲ್ಲಿ ಅತಿಯಾಗಿ ನಂಬಿದ್ದ ವ್ಯಕ್ತಿಗಳೇ ದ್ರೋಹ ಬಗೆದದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಯಿತು ಎಂದು ನೊಂದು ನುಡಿದರು.

ಎಲ್ಲ ಸವಾಲುಗಳನ್ನು ಎದುರಿಸಿ ಹೊರಬರುವ ವಿಶ್ವಾಸವಿದೆ. ನಾನು ಎಲ್ಲಿಗೂ ಓಡಿಹೋಗುವುದಿಲ್ಲ. ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುತ್ತೇನೆ. ದೇಶ ವಿದೇಶಗಳಲ್ಲಿ 247 ಆಸ್ಪತ್ರೆಗಳಿದ್ದವು. ಈಗ ಬಹುತೇಕ ಕಳೆದುಕೊಂಡಿದ್ದೇನೆ. ವಿದೇಶಗಳಲ್ಲಿದ್ದ ಉದ್ಯಮದಲ್ಲಿ ಭಾರೀ ನಷ್ಟ ಅನುಭವಿಸಿದ್ದರೂ ಭಾರತದಲ್ಲಿ ಒಂದು ರೂಪಾಯಿ ಕೂಡಾ ಸಾಲ ಇಲ್ಲ.

ಪ್ರಧಾನಿ ನರೇಂದ್ರ ಮೋದಿ ಆಪ್ತರಾಗಿದ್ದರೂ ನೆರವು ಕೇಳಿಲ್ಲ. ಕಾರಣ ನೀರವ್ ಮೋದಿ, ವಿಜಯ್ ಮಲ್ಯ ಆಯ್ತು, ಈಗ ಬಿ. ಆರ್. ಶೆಟ್ಟಿ ಸರದಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಲು ಶುರು ಮಾಡುತ್ತಾರೆ. ನನ್ನ ಸಮಸ್ಯೆಯನ್ನು ಸ್ವತಃ ಬಗೆಹರಿಸಿಕೊಳ್ಳುತ್ತೇನೆ. ಮೋದಿಗೇಕೆ ಕಷ್ಟ ಎಂದು ಖೇದದಿಂದ ಹೇಳಿದರು.

ಡೊನಾಲ್ಡ್ ಟ್ರಂಪ್ ಗೆ ಹಿಂದೆ ಕ್ರೆಡಿಟ್ ಕಾರ್ಡ್ ನೀಡಲು ಬ್ಯಾಂಕುಗಳು ಹಿಂದೇಟು ಹಾಕಿದ್ದವು. ದಿವಾಳಿಯಂಚಿಗೆ ತಲುಪಿದ್ದ ಟ್ರಂಪ್, ಸವಾಲುಗಳನ್ನು ಮೆಟ್ಟಿ ಅಮೆರಿಕಾದ ಅಧ್ಯಕ್ಷ ಹುದ್ದೆಗೇರಿದರು. ನಾನೂ ಮತ್ತೆ ನನ್ನ ಗತವೈಭವವನ್ನು ಮರಳಿ ಪಡೆಯುತ್ತೇನೆ ಎಂದು ಬಿ. ಆರ್. ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!