Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಲು ಚಿಂತನೆ

ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಲು ಚಿಂತನೆ

ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಲು ಚಿಂತನೆ

(ಸುದ್ದಿಕಿರಣ ವರದಿ)
ಉಡುಪಿ: ಬಿಲ್ಲವ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯದಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮ ಆರಂಭಿಸುವ ಚಿಂತನೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಇಲ್ಲಿನ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಮೇಲು ಕೀಳು ಭಾವನೆ, ಜಾತೀಯ ಸಂಘರ್ಷ, ಅಸಮಾನತೆಯ ಧ್ವನಿ ಇಂದಿಗೂ ಕಂಡುಬರುತ್ತಿದೆ. ನಾರಾಯಣ ಗುರುಗಳ ಬೋಧನೆಯ ಅನುಸರಣೆ ಮೂಲಕ ಪ್ರಸ್ತುತ ಸಮಾಜದಲ್ಲಿ ಪರಿವರ್ತನೆ ತರುವುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ.

ಬಿಲ್ಲವ ಸಮುದಾಯಕ್ಕೆ ಆರ್ಥಿಕ ಚೈತನ್ಯ ನೀಡಲು ನಾರಾಯಣ ಗುರು ಅಭಿವೃದ್ಧಿ ನಿಗಮ ಆರಂಭಿಸಿ, ಅದರಂತೆ ಕಾರ್ಯ ಯೋಜನೆ ರೂಪಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು ಎಂದರು.

ಬೋಧನೆ ಸಾರ್ವಕಾಲಿಕ
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶತಮಾನಗಳ ಕಾಲ ಸಾಮಾಜಿಕ ತುಡಿತಕ್ಕೊಳಗಾದ ಸಮಾಜದ ಜನರನ್ನು, ಅಸ್ಪೃಶ್ಯತೆಗೊಳಗಾದವರನ್ನು ಮುಖ್ಯವಾಹಿನಿಯಲ್ಲಿ ಒಗ್ಗೂಡಿಸಿ ಕರೆತರುವ ಪ್ರಯತ್ನ ಮಾಡಿದ ನಾರಾಯಣ ಗುರುಗಳು, ರಕ್ತ ಕ್ರಾಂತಿಯಿಲ್ಲದೇ ಸಮಾಜದಲ್ಲಿ ಪರಿವರ್ತನೆ ತಂದರು. ಇಂದಿಗೂ ಅವರ ಬೋಧನೆಗಳು ಪ್ರಸ್ತುತ ಎಂದರು.

ತಾನು ಮುಜರಾಯಿ ಸಚಿವನಾಗಿದ್ದಾಗ ನಾರಾಯಣ ಗುರು ಮಂದಿರಗಳನ್ನು ದೇವಾಲಯಗಳ ಪಟ್ಟಿಗೆ ಸೇರ್ಪಡೆ ಮಾಡಿದ್ದು, ಅದರಿಂದಾಗಿ ನಾರಾಯಣ ಗುರು ಮಂದಿರಗಳ ಅಭಿವೃದ್ಧಿಗೆ ಸರ್ಕಾರದಿಂದ ವಿವಿಧ ಅನುದಾನ ದೊರೆಯಲು ಸಾಧ್ಯವಾಗಿದೆ ಎಂದರು.

ಸಮಾನತೆಯ ಬೆಳವಣಿಗೆಗೆ ಯತ್ನ
ನಾರಾಯಣ ಗುರು ಕುರಿತು ವಿಶೇಷ ಉಪನ್ಯಾಸ ನೀಡಿದ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್, ಅಸಮಾನತೆ ಅಸ್ಪೃಶ್ಯತೆ ಮೂಢನಂಬಿಕೆಗಳಿಗೆ ಶಿಕ್ಷಣದಿಂದ ಮಾತ್ರ ಪರಿಹಾರ ಸಾಧ್ಯ ಎಂದು ತಿಳಿಸಿದವರು ನಾರಾಯಣ ಗುರುಗಳು. ಅವರ ಬೋಧನೆಗಳು ಎಲ್ಲಾ ಕಾಲಕ್ಕೂ ಸೂಕ್ತವಾಗಿವೆ.

ಶೋಷಿತರು, ದಮನಿತರ ಪರವಾಗಿ ರಕ್ತಪಾತವಿಲ್ಲದ ಚಳುವಳಿ ಆರಂಭಿಸಿದ ಅವರು, ಸಮಾಜದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಾನತೆಯ ಬೆಳವಣಿಗೆಗೆ ಪ್ರಯತ್ನಿಸಿದ್ದರು ಎಂದರು.

ಪಠ್ಯದಲ್ಲಿ ಬರಲಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್, ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆ ಶಾಲಾ ಪಠ್ಯ ಪುಸ್ತಕದಲ್ಲಿ ಅಳವಡಿಕೆಯಾಗಬೇಕು. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶಿಕ್ಷಣ
ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಅಸಮಾನತೆ ವಿರುದ್ಧದ ಹೋರಾಟಕ್ಕೆ ನಾರಾಯಣ ಗುರು ಕೊಡುಗೆ ಅಮೂಲ್ಯ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಬನ್ನಂಜೆ ಬಿಲ್ಲವರ ಸೇವಾ ಸಂಘ ಅಧ್ಯಕ್ಷ ಆನಂದ ಪೂಜಾರಿ ಇದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ವಂದಿಸಿದರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!