Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಆಮಿಷಗಳಿಗೆ ಬಲಿಯಾಗದೆ ಮತ ಚಲಾಯಿಸಿ

ಆಮಿಷಗಳಿಗೆ ಬಲಿಯಾಗದೆ ಮತ ಚಲಾಯಿಸಿ

ಉಡುಪಿ: ಚುನಾವಣೆ ಸಂದರ್ಭದಲ್ಲಿ ಮತದಾರರು, ಅಭ್ಯರ್ಥಿಗಳು ಒಡ್ಡುವ ಯಾವುದೇ ಆಮಿಷಗಳಿಗೆ ಬಲಿಯಾಗದೆ ಪ್ರಾಮಾಣಿಕವಾಗಿ ಮತ್ತು ನ್ಯಾಯಸಮ್ಮತವಾಗಿ ಮತ ಚಲಾಯಿಸಿ, ಚುನಾವಣೆಯ ಘನತೆ ಎತ್ತಿಹಿಡಿಯಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ. ಎನ್. ಸುಬ್ರಹ್ಮಣ್ಯ ಹೇಳಿದರು.

ಸೋಮವಾರ ಇಲ್ಲಿನ ಪುರಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮತದಾನದ ಅರ್ಹತೆ ಹೊಂದಿದ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ, ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಚುನಾವಣೆಯಲ್ಲಿ ಹಣ, ಹೆಂಡ ಇತ್ಯಾದಿ ಹಂಚುವುದನ್ನು ತಡೆಯುವ ನಿಟ್ಟಿನಲ್ಲಿ ಚುನಾವಣೆಗಿಂತ ಕನಿಷ್ಟ 2 ವರ್ಷ ಮುಂಚೆ ಹಣ ಸಂಗ್ರಹ ಮಾಡುವವರ ಬಗ್ಗೆ ನಿಗಾ ವಹಿಸುವುದರಿಂದ ಮತದಾರರಿಗೆ ಅಕ್ರಮ ಹಣ ವಿತರಣೆ ಮಾಡುವುದನ್ನು ತಡೆಯಲು ಸಾಧ್ಯ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅವರು ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕಾವೇರಿ, ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಚಲಾಯಿಸಬೇಕು. ಪ್ರಜಾಪ್ರಭುತ್ವದ ಯಶಸ್ಸಿಗೆ ಚುನಾವಣೆ ಅಗತ್ಯವಾಗಿದ್ದು, ಮತದಾನದಿಂದ ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಿದಲ್ಲಿ ದೇಶದ ಪ್ರಗತಿ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ. ಜಗದೀಶ್, ಜಿಲ್ಲೆಯಲ್ಲಿ 10,16,660 ಮತದಾರರಿದ್ದು, ಈ ವರ್ಷ 20 ಸಾವಿರ ಯುವ ಮತದಾರರನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಕೊರೊನಾದಿಂದಾಗಿ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳದ ಹಿನ್ನೆಲೆಯಲ್ಲಿ 9,702 ಮಂದಿ ಯುವ ಮತದಾರರ ಸೇರ್ಪಡೆಯಾಗಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅರ್ಹರಿದ್ದು, ಜಿಲ್ಲೆಯ ಎಲ್ಲಾ ಕಾಲೇಜುಗಳಿಗೆ ಕೂಡಲೇ ಮತದಾರರ ಪಟ್ಟಿ ಸೇರ್ಪಡೆ ಕುರಿತ ಅರ್ಜಿ ಫಾರಮ್ ಕಳಿಸಲಾಗುವುದು. ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಭರ್ತಿ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಜೊತೆಗೆ, ಮತದಾರರ ಪಟ್ಟಿಗೆ ಇನ್ನೂ ಸೇರ್ಪಡೆಗೊಳ್ಳದ ತಮ್ಮ ನೆರೆಹೊರೆಯವರನ್ನೂ ಸೇರ್ಪಡೆ ಮಾಡುವಂತೆ ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಹಣ, ಜಾತಿ, ಭಾಷೆ, ಧರ್ಮದ ಪ್ರಲೋಭನೆಗಳಿಗೆ ಬಲಿಯಾಗದೇ ಸಮರ್ಥ ವ್ಯಕ್ತಿಗೆ ಮತ ಚಲಾಯಿಸುವಂತೆ ಅವರು ಕಿವಿಮಾತು ಹೇಳಿದರು.

ಜಿ. ಪಂ. ಸಿಇಓ ಡಾ. ನವೀನ ಭಟ್, ಎಸ್.ಪಿ ವಿಷ್ಣುವರ್ಧನ್, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ಡಿಡಿಪಿಐ ಎನ್. ಎಚ್. ನಾಗೂರ, ಅಜ್ಜರಕಾಡು ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ ಇದ್ದರು.

ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಎಪಿಕ್ ಕಾರ್ಡ್ ವಿತರಣೆ ಹಾಗೂ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!