ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ
(ಸುದ್ದಿಕಿರಣ ವರದಿ)
ಉಡುಪಿ: ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹೇಳಿದರು.
ಅಜ್ಜರಕಾಡು ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ರಸಾಯನಶಾಸ್ತ್ರ ಪ್ರಯೋಗಾಲಯ ಮತ್ತು ಸುಸಜ್ಜಿತ ಗ್ರಂಥಾಲಯ ಉದ್ಘಾಟನೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಾಲಪರಿಸ್ಥಿತಿಗೆ ಅನುಗುಣವಾಗಿ ಶಿಕ್ಷಣ ಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಉದ್ದೇಶದಿಂದ 36 ವರ್ಷಗಳ ಬಳಿಕ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಕರ್ನಾಟಕದಲ್ಲಿ ಪ್ರಥಮವಾಗಿ ಅನುಷ್ಠಾನಗೊಳ್ಳಲಿದೆ. ಶಿಕ್ಷಕರು, ಶಿಕ್ಷಣ ತಜ್ಞರು, ವಿ.ವಿ. ಮುಖ್ಯಸ್ಥರು ಮೊದಲಾದವರ ಸಲಹೆ ಸೂಚನೆ ಪಡೆದುಕೊಂಡು ವಿದ್ಯಾರ್ಥಿ ಸ್ನೇಹಿಯಾಗಿ ನೀತಿ ರೂಪಿಸಲಾಗಿದ್ದು, ಔದ್ಯೋಗಿಕ ಮತ್ತು ಕೌಶಲ್ಯ ವೃದ್ಧಿಗೆ ಆಸ್ಪದ ನೀಡಲಾಗಿದೆ. ತಾಂತ್ರಿಕತೆಯನ್ನು ಬಳಸಿಕೊಂಡು ಪರಿಣಾಮಕಾರಿ ಬೋಧನಾ ವಿಧಾನ ಸಿದ್ಧಪಡಿಸಲಾಗಿದೆ.
ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರೂ ಕೇವಲ ವಿರೋಧಕ್ಕಾಗಿ ವಿರೋಧ ಪಕ್ಷಗಳು ಶಿಕ್ಷಣ ನೀತಿಯನ್ನು ವಿರೋಧಿಸಿರುವುದು ಖೇದಕರ ಎಂದರು.
ಶಿಕ್ಷಣದಲ್ಲಿ ಕೃಷಿ ಅಳವಡಿಸಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್, ರಾಜ್ಯದ ವಿವಿಧ ಜಿಲ್ಲೆಗಳ ಬಡವರ ಮಕ್ಕಳೇ ಅಧಿಕವಾಗಿ ವ್ಯಾಸಂಗ ಪಡೆಯುತ್ತಿರುವ ಈ ಕಾಲೇಜಿನ ಮೂಲಭೂತ ಸೌಕರ್ಯಗಳಿಗೆ ಸಹಕಾರ ನೀಡುವಂತೆ ವಿನಂತಿಸಿದರು.
ಶಿಕ್ಷಣದಲ್ಲಿ ಕೃಷಿಯನ್ನು ಅಳವಡಿಸುವಂತೆ ಸಲಹೆ ನೀಡಿದ ಅವರು, ನೀತಿ ರೂಪಣೆ ಸಂದರ್ಭದಲ್ಲಿ ಸರ್ಕಾರಿ ಕಾಲೇಜುಗಳಿಗೆ ಕೆಲವು ವಿನಾಯಿತಿ ನೀಡುವಂತೆ ವಿ.ವಿ.ಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು.
ಸಂಜೆ ಕಾಲೇಜಿಗೆ ಮನವಿ
ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಮತ್ತು ಗ್ರಂಥಾಲಯ ನಿರ್ಮಿಸಿಕೊಟ್ಟ ಕಾಲೇಜಿನ ಮಹಾಪೋಷಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಅವರನ್ನು ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಜ್ಜರಕಾಡು ಕಾಲೇಜಿನಲ್ಲಿ ಸಂಧ್ಯಾ ಕಾಲೇಜು ಆರಂಭಿಸುವಂತೆ ಮನವಿ ಮಾಡಿದರು. ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ, ಹಾಸ್ಟೆಲ್ ನಿರ್ಮಾಣಕ್ಕೆ ಅಗತ್ಯ ಹಣಕಾಸು ನೆರವು ನೀಡುವಂತೆ ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಲಾಡಳಿತ ಸಮಿತಿ ಸದಸ್ಯ, ದ.ಕ. ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿ. ಪಂ. ಸಿಇಓ ಡಾ. ನವೀನ ಭಟ್, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಜೆನ್ನಿಫರ್ ಲೊಲಿಟಾ ಇದ್ದರು.
ಈ ಸಂದರ್ಭದಲ್ಲಿ ಡಾ| ಶಿವಾನಂದ ನಾಯಕ್ ಬರೆದಿರುವ ಜೀವ ರಸಾಯನಶಾಸ್ತ್ರ ಪಠ್ಯಪುಸ್ತಕ ಅನಾವರಣಗೊಳಿಸಲಾಯಿತು.
ಸಚಿವ ಅಶ್ವತ್ಥನಾರಾಯಣ ಅವರನ್ನು ಗೌರವಿಸಲಾಯಿತು.
ಕಾಲೇಜು ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ ಎಸ್. ಸ್ವಾಗತಿಸಿ, ಡಾ| ಶ್ರೀಧರ ಪ್ರಸಾದ್ ವಂದಿಸಿದರು. ಡಾ| ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು