Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮೀನುಗಾರಿಕೆ ಹೊಸ ಮಸೂದೆ ಅಭಿಪ್ರಾಯ ಸಂಗ್ರಹಿಸಿ

ಮೀನುಗಾರಿಕೆ ಹೊಸ ಮಸೂದೆ ಅಭಿಪ್ರಾಯ ಸಂಗ್ರಹಿಸಿ

ಉಡುಪಿ: ಕೇಂದ್ರದಲ್ಲಿ ಹೊಸ ಮೀನುಗಾರಿಕೆ ಮಸೂದೆ ಸಿದ್ಧವಾಗುತ್ತಿದ್ದು, ಆ ಕುರಿತು ಸಲಹೆ ಮತ್ತು ಅಭಿಪ್ರಾಯ ಕ್ರೋಢೀಕರಿಸಿ ಸಲ್ಲಿಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶುಕ್ರವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಳೆ ಹಾನಿ ಕುರಿತು ಪರಿಶೀಲಿಸಿದರು.

ಸಾಗರಮಾಲಾ ಮಾಹಿತಿ ನೀಡಿ
ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಂಜೂರಾತಿಗೆ ಬಾಕಿ ಇರುವ ಜಿಲ್ಲೆಯ ವಿವಿಧ ಯೋಜನೆ ಮತ್ತು ಕಾಮಗಾರಿಗಳ ಪಟ್ಟಿಯನ್ನು ಕೂಡಲೇ ಸಲ್ಲಿಸಿ. ಆ ಬಗ್ಗೆ ಕೇಂದ್ರದ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ, ಶೀಘ್ರ ಮಂಜೂರಾತಿಗೆ ಯತ್ನಿಸಲಾಗುವುದು.

ಜಿಲ್ಲೆಯಲ್ಲಿ ಸಾಗರಮಾಲಾ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳ ಬಗ್ಗೆ ಸವಿವರ ಮಾಹಿತಿ ನೀಡಿ. ಉಪ್ಪುಂದದಲ್ಲಿ 130 ಕೋ. ರೂ. ವೆಚ್ಚದಲ್ಲಿ ಬಂದರು ನಿರ್ಮಾಣ ಕುರಿತಂತೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದರು.

ಕೋವಿಡ್ 3ನೇ ಅಲೆ ಬಗ್ಗೆ ಎಚ್ಚರಿಕೆ ಅಗತ್ಯ
ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ ಎದುರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗತ ಅಂತರ ಪಾಲನೆ ಕುರಿತು ಪರಿಶೀಲಿಸಿ. ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿ ವ್ಯಕ್ತಿಗತ ಅಂತರ ಪಾಲನೆ ಬಗ್ಗೆ ಕಾರ್ಖಾನೆಗಳಿಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲಿಸಬೇಕು. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಲಾಗಿರುವ ಆಕ್ಸಿಜನ್ ಘಟಕಗಳು ಶೀಘ್ರದಲ್ಲಿ ಕಾರ್ಯನಿರ್ವಹಣೆ ಮಾಡುವಂತೆ ಕ್ರಮ ಕೈಗೊಳ್ಳಿ. ದುರ್ಬಲ ವರ್ಗದವರಿಗೆ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡಿ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಠಿಕ ಆಹಾರ ಒದಗಿಸುವಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸಲು ಸಚಿವೆ ಶೋಭಾ ಸೂಚಿಸಿದರು.

ಸಂತ್ತಸ್ತರಿಗೆ ತಕ್ಷಣ ಪರಿಹಾರ
ಮಳೆಗಾಲದ ಅವಧಿಯಲ್ಲಿ ನೆರೆ ಹಾನಿಗೊಳಗಾಗುವ ಸಂತ್ರಸ್ತರಿಗೆ ತಕ್ಷಣ ಪರಿಹಾರ ವಿತರಿಸುವಂತೆ ತಿಳಿಸಿದ ಸಚಿವೆ ಶೋಭಾ, ಹಾನಿಗೊಳಗಾಗುವ ತಗ್ಗು ಪ್ರದೇಶ ಗುರುತಿಸಿಕೊಂಡು ಆ ಪ್ರದೇಶದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಯಾವುದೇ ಸಂದರ್ಭದಲ್ಲಿ ನೆರವು ನೀಡಲು ಸಿದ್ಧವಾಗಿರುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ ಪ್ರಾಕೃತಿಕ ವಿಕೋಪದಿಂದ 110 ಕೋ. ರೂ. ಮೂಲಸೌಕರ್ಯಕ್ಕೆ ಹಾನಿಯಾಗಿದ್ದು, ಅದರಲ್ಲಿ ಸಮುದ್ರ ಕೊರೆತದಿಂದ 99 ಕೋ. ರೂ. ಹಾನಿ ಸಂಭವಿಸಿದೆ. ಈ ಬಗ್ಗೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್ 3ನೇ ಅಲೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟು 50 ಮಕ್ಕಳ ಐಸಿಯು ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ 2.40 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯ ನಡೆಯುತ್ತಿದೆ. ಎಂಡೋ ಸಲ್ಫಾನ್ ಪೀಡಿತರು ಹಾಗೂ ಅವರ ಕುಟುಂಬದವರಿಗೆ ಲಸಿಕೆ ನೀಡಲಾಗುತ್ತಿದೆ. ನೆರೆ ಪರಿಹಾರಕ್ಕಾಗಿ 11 ಕೋ. ರೂ. ಹಣ ಇದ್ದು, ಅನುದಾನದ ಕೊರತೆ ಇಲ್ಲ. ವಿಕೋಪ ನಿರ್ವಹಣೆಗೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಜಿ.ಪಂ. ಸಿಇಒ ಡಾ. ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಕಮೀಷನರ್ ರಾಜು ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಎಲ್ಲಾ ತಹಶೀಲ್ದಾರರು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!