Thursday, July 7, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಅವಕಾಶ ವಂಚಿತ ಮಕ್ಕಳ ಬದುಕಿಗೆ ಅವಕಾಶ ನೀಡಿ

ಅವಕಾಶ ವಂಚಿತ ಮಕ್ಕಳ ಬದುಕಿಗೆ ಅವಕಾಶ ನೀಡಿ

ಸುದ್ದಿಕಿರಣ ವರದಿ
ಶನಿವಾರ, ಮೇ 14

ಅವಕಾಶ ವಂಚಿತ ಮಕ್ಕಳ ಬದುಕಿಗೆ ಅವಕಾಶ ನೀಡಿ
ಉಡುಪಿ: ಯಾವುದೇ ಮಕ್ಕಳು ಅನಾಥರಾಗಿರುವುದಿಲ್ಲ. ಆದರೆ, ಅವರು ಅವಕಾಶದಿಂದ ಮಾತ್ರ ವಂಚಿತರಾಗಿರುತ್ತಾರೆ. ಅಂಥ ಮಕ್ಕಳಿಗೆ ಶಿಕ್ಷಣ ನೀಡಿ ಬದುಕಿನ ಅವಕಾಶ ಕಲ್ಪಿಸಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಪೇಜಾವರ ಮಠ ಆಡಳಿತಕ್ಕೊಳಪಟ್ಟ ಇಲ್ಲಿನ ಕುಕ್ಕಿಕಟ್ಟೆ ಅವಕಾಶ ವಂಚಿತ ಮಕ್ಕಳ ಆಶ್ರಯಧಾಮ ಶ್ರೀಕೃಷ್ಣ ಬಾಲನಿಕೇತನದಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಲಾದ ಕಟ್ಟಡದ ವಿಸ್ತರಿತ ಭಾಗವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಮಾನವನ ಸೇವೆಯೇ ಮಾಧವನ ಸೇವೆ ಎಂಬುದು ಪೇಜಾವರ ಮಠದ ಶ್ರೀಕೃಷ್ಣ ಬಾಲನಿಕೇತನ ಸಂಸ್ಥೆಯಲ್ಲಿ ಸಕಾರಗೊಂಡಿದೆ ಎಂದವರು ಸಂತಸ ವ್ಯಕ್ತಪಡಿಸಿದರು.

ಮಹಿಳೆ, ಮಕ್ಕಳ ಬಗ್ಗೆ ಕಾಳಜಿ
ಪ್ರಧಾನಿ ಮೋದಿ ಸದಾ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿದ್ದು, ಅದಕ್ಕಾಗಿಯೇ ಆರಂಭಿಸಿರುವ ಚೈಲ್ಡ್ ಲೈನ್ 24*7 ಸೇವೆ ಈ ಬಾಲನಿಕೇತನ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವುದು ತನಗೆ ಭರವಸೆ ಮೂಡಿಸಿದೆ ಎಂದರು.

ಈ ಪ್ರಾಂತ್ಯದ ಜನರು ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣಕ್ಕಾಗಿ ಮದ್ರಾಸ್, ಮುಂಬೈಗೆ ತೆರಳಬೇಕಾಗಿತ್ತು. ಆದರೆ, ಕರಾವಳಿಯ ಜನರು ಸ್ವಾತಂತ್ರ್ಯಾ ನಂತರ ಸರಕಾರವನ್ನು ಕಾಯದೇ ತಾವೇ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಕೊಂಡು, ಇದೀಗ ಈ ಪ್ರದೇಶದ ಗುಣಮಟ್ಟದ ಶಿಕ್ಷಣ ದೇಶಕ್ಕೆ ಉದಾಹರಣೆ ಎಂದು ಬಣ್ಣಿಸಿದರು.

ಮಕ್ಕಳು ಸಮಾಜದ ಆಸ್ತಿಯಾಗಬೇಕು
ಸಾನ್ನಿಧ್ಯ ವಹಿಸಿದ್ದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀಕೃಷ್ಣ ಗರ್ಭಗುಡಿಯಲ್ಲಿಲ್ಲ. ಬದಲಿಗೆ ಸಮಾಜದ ಅವಕಾಶ ವಂಚಿತ ಮಕ್ಕಳಲ್ಲಿರುತ್ತಾನೆ.

ಆದ್ದರಿಂದ ಅವರ ಸೇವೆ ಮಾಡುವುದು ಕೃಷ್ಣನ ಪೂಜೆ ಸಮ ಎಂಬ ಆಶಯದಿಂದ ಈ ಸಂಸ್ಥೆಯನ್ನು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ಥಾಪಿಸಿದ್ದರು.

ಈ ಮಕ್ಕಳು ದಾರಿ ತಪ್ಪಬಾರದು, ಸಮಾಜ ಕಂಠಕರಾಗಬಾರದು; ಸಮಾಜದ ಆಸ್ತಿಯಾಗಬೇಕು ಎಂಬುದೇ ನಮ್ಮ ಕಾಳಜಿ ಎಂದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸಿಂಡಿಕೇಟ್ ಬ್ಯಾಂಕ್ ಮಾಜಿ ನಿರ್ದೇಶಕ ಲಕ್ಷ್ಮೀನಾರಾಯಣ ವೇದಿಕೆಯಲ್ಲಿದ್ದರು.

ಸೇವಾಧಾಮ ಟ್ರಸ್ಟ್ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಶ್ಯಾಮಲಾ ಪ್ರಸಾದ್ ನಿರೂಪಿಸಿದರು.

ಸನ್ಮಾನ
ಈ ಸಂದರ್ಭದಲ್ಲಿ ಪೇಜಾವರ ಮಠ ವತಿಯಿಂದ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸನ್ಮಾನಿಸಲಾಯಿತು.

ಸಂಸ್ಕೃತದಲ್ಲಿ ಬರೆದ ಸಂಮಾನಪತ್ರ ನೀಡಲಾಯಿತು.

ಶ್ರೀಕೃಷ್ಣನ ಪಂಚಲೋಹನ ಪುತ್ಥಳಿಯನ್ನು ಸ್ಮರಣಿಕೆಯಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನೀಡಿದರು.

ಸಸಿ ನೆಟ್ಟ ಸಚಿವೆ
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರ 20 ಲಕ್ಷ ರೂ. ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಲಾಗಿರುವ ಈ ಕಟ್ಟಡವನ್ನು ಅವರೇ ಉದ್ಘಾಟಿಸಿದ್ದರು.

ಇದೀಗ ತನ್ನ ಪ್ರದೇಶಾಭಿವೃದ್ಧಿ ನಿಧಿ 20 ಲಕ್ಷ ರೂ. ವೆಚ್ಚದಲ್ಲಿ ವಿಸ್ತೃತ ಕಟ್ಟಡವನ್ನು ನಿರ್ಮಿಸಲಾಗಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು.

ಅದರ ಸವಿನೆನಪಿಗಾಗಿ ಅವರು ಆವರಣದಲ್ಲಿ ಗಿಡವೊಂದನ್ನು ನೆಟ್ಟು ನೀರೆರೆದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!