Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ನಿತ್ಯಾನುಷ್ಠಾನದಿಂದ ಸಮಾಜ ಸ್ವಾಸ್ಥ್ಯ ಸಾಧ್ಯ

ನಿತ್ಯಾನುಷ್ಠಾನದಿಂದ ಸಮಾಜ ಸ್ವಾಸ್ಥ್ಯ ಸಾಧ್ಯ

ಉಡುಪಿ: ಜಪ ತಪಾದಿ ನಿತ್ಯಾನುಷ್ಠಾನದಿಂದ ಸಮಾಜ ಸ್ವಾಸ್ಥ್ಯ ಸಾಧ್ಯ ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಕುಂಜಾರುಗುರಿ ಶ್ರೀ ದುರ್ಗಾದೇವಿ ದೇವಸ್ಥಾನ ವಠಾರದಲ್ಲಿ ಈಚೆಗೆ ನಡೆದ ಕುಂಜಾರುಗಿರಿ ಗಿರಿಬಳಗದ 32ನೇ ವಾರ್ಷಿಕೋತ್ಸವದಲ್ಲಿ  ಮಾತನಾಡಿದರು.

ಇಂದಿನ ಮಕ್ಕಳು ಜೀವನದಲ್ಲಿ ದಾರಿ ತಪ್ಪುತ್ತಿರುವುದು ಬೇಸರದ ಸಂಗತಿ. ಹಿರಿಯರು ಮಾರ್ಗದರ್ಶನ ನೀಡಿದರೂ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಅದಕ್ಕಾಗಿ ಮನೆಯಲ್ಲಿ ನಿತ್ಯಾನುಷ್ಠಾನ ಮಾಡುವಾಗ ಎಲ್ಲರಿಗೂ ಒಳ್ಳೆಯ ಬುದ್ಧಿ ಪ್ರಚೋದನೆ ಮಾಡು ಎಂದು ಭಗವಂತನಲ್ಲಿ ಬೇಡಿಕೊಳ್ಳುವುದೇ ಉತ್ತಮ ದಾರಿ. ಆದುದರಿಂದ ಪ್ರತೀ ಮನೆಯಲ್ಲಿಯೂ ವಿಪ್ರರು ಹೆಚ್ಚು ಸಂಖ್ಯೆಯಲ್ಲಿ ಗಾಯತ್ರಿ ಜಪ ಮಾಡಬೇಕು ಹಾಗೂ ಸ್ತ್ರೀಯರು ಲಕ್ಷ್ಮೀ ಶೋಭಾನೆ ಮತ್ತು ಭಜನೆಯನ್ನು ಪ್ರತಿದಿನವೂ ಮಾಡುವುದು ಒಳಿತು ಎಂದು ಸಲಹೆ ನೀಡಿದರು.

ಕಳೆದ 31 ವರ್ಷದಿಂದ ಅನೇಕ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಉತ್ತಮ ಸಾಧನೆ ಮಾಡಿದೆ. ಇನ್ನು ಮುಂದಿನ ಪೀಳಿಗೆಯ ವಿಪ್ರರಿಗೆ ಬೇಕಾದ ಸಂಸ್ಕಾರಯುತ ಮೌಲ್ಯಗಳು ಬಳಗದಿಂದ ಲಭಿಸುವಂತಾಗಲಿ ಎಂದು ಶ್ರೀಗಳು ಅನುಗ್ರಹ ಸಂದೇಶ ನೀಡಿದರು.

ಪುತ್ತೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪ್ರೊ. ಸುಬ್ರಹ್ಮಣ್ಯ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸಾಣೂರು ಶ್ರೀರಾಮ ಭಟ್ ಅಭ್ಯಾಗತರಾಗಿದ್ದರು. ಬಳಗದ ಗೌರವಾಧ್ಯಕ್ಷ ಕೆ. ಗೋವಿಂದ ಭಟ್ ಹಾಗೂ ಗಿರಿ ಭಗಿನಿಯರ ಅಧ್ಯಕ್ಷೆ ಮೀರಾ ಭಟ್ ಇದ್ದರು.

ಕುಂಜಾರುಗಿರಿ ಶಂಖತೀರ್ಥ ಮಠದ ಕೃಷ್ಣಮೂರ್ತಿ ಉಪಾಧ್ಯಾಯ ಅವರಿಗೆ ಬಳಗದ ವತಿಯಿಂದ ಮತ್ತು ಮೀರಾ ಕೃಷ್ಣಮೂರ್ತಿ ಉಪಾಧ್ಯಾಯ ಅವರಿಗೆ ಗಿರಿ ಭಗಿನಿಯರ ವತಿಯಿಂದ ಸನ್ಮಾನಿಸಲಾಯಿತು.

ಬೆಂಗಳೂರಿನ ಪದ್ಮಕಮಲ ಟ್ರಸ್ಟ್ ವತಿಯಿಂದ ಈರ್ವರು ಅರ್ಹ ಫಲನುಭವಿಗಳಿಗೆ ಧನಸಹಾಯ ಮಾಡಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸಾಲ್ಮರ ಗೋವಿಂದ ಭಟ್ ಪ್ರತಿಷ್ಠಾನ, ಬೆಳ್ಳೆ ಶ್ಯಾಮಣ್ಣ ಸಾಮಗ ಮತ್ತು ಪದ್ಮಾವತಿ ಅಮ್ಮನವರ ಸ್ಮರಣಾರ್ಥ ಕುಸುಮ ಮತ್ತು ಡಾ. ಬೆಳ್ಳೆ ರಾಜಗೋಪಾಲ ಸಾಮಗ, ಉಡುಪಿ ಉದ್ಯಮಿ ರಂಜನ್ ಕಲ್ಕೂರ ಪ್ರಯೋಜಕತ್ವದ ಪ್ರತಿಭಾ ಪುರಸ್ಕಾರ ನೀಡಲಾಯಿತು

ಬಳಗದ ಸದಸ್ಯರು ಮತ್ತು ಅವರ ಕುಟುಂಬದವರಿಗೆ ಸರ್ಕಾರದ ಅಯುಷ್ಮಾನ್ ಅರೋಗ್ಯ ಕಾರ್ಡನ್ನು ಬಳಗದ ವತಿಯಿಂದ ಮಾಡಲಾಗಿದ್ದು, ಸಾಂಕೇತಿಕವಾಗಿ ಶ್ರೀಪಾದರು ಕಾರ್ಡು ವಿತರಿಸಿದರು.

ಬಳಗದ ಅಧ್ಯಕ್ಷ ವಿನಯಪ್ರಸಾದ್ ಸ್ವಾಗತಿಸಿ, ಕಾರ್ಯದರ್ಶಿ ಶ್ರೀನಿವಾಸ ಭಟ್ ವಾರ್ಷಿಕ ವರದಿ ವಾಚಿಸಿದರು. ಶ್ರೀಶ ಸಾಮಗ ಮತ್ತು ರಾಘವೇಂದ್ರ ಭಟ್ ನಿರೂಪಿಸಿದರು. ಉಪಾಧ್ಯಕ್ಷ ಪುಂಡರೀಕಾಕ್ಷ ಭಟ್ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!