ಸುದ್ದಿಕಿರಣ ವರದಿ
ಸೋಮವಾರ, ಆಗಸ್ಟ್ 1
ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ
ಉಡುಪಿ: ದ.ಕ. ಜಿಲ್ಲೆಯಲ್ಲಿ ನಡೆದಿರುವ ಸರಣಿ ಕೊಲೆಗಳ ತನಿಖೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ಪೊಲೀಸ್ ಇಲಾಖೆ ಕೈಗೊಳ್ಳುತ್ತಿದೆ. ಲಭ್ಯ ಸಾಕ್ಷ್ಯಾಧಾರಗಳ ಆಧಾರದಲ್ಲಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ.
ತನಿಖೆಯಲ್ಲಿ ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರತ್ಕಲ್ ಹಾಗೂ ಸುಳ್ಯ ಘಟನೆಗೆ ಸಂಬಂಧಿಸಿ ಮಹತ್ತರ ಸುಳಿವು ಲಭಿಸಿರುವುದೂ ಪೊಲೀಸ್ ಇಲಾಖೆಯಿಂದ ತನಗೆ ತಿಳಿದಿದೆ.
ಎಡಿಜಿಪಿ ಮಸೂದ್ ದ.ಕ. ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿದ್ದಾರೆ. ಪೊಲೀಸರು ನೈಜ ಅಪರಾಧಿಗಳನ್ನು ಪತ್ತೆಹಚ್ಚುವ ವಿಶ್ವಾಸ ಇದೆ ಎಂದರು.
ಜೊತೆಗೆ ಕೊಲೆಯ ಕಾರಣ, ಅದರ ಹಿಂದಿರುವ ಶಕ್ತಿಗಳು, ಹಣಕಾಸಿನ ನೆರವು, ನಿಜವಾದ ಕೊಲೆಗಡುಕರು ಯಾರು ಇತ್ಯಾದಿಗಳೆಲ್ಲವೂ ಬಹಿರಂಗಗೊಳ್ಳುವ ವಿಶ್ವಾಸವಿದೆ ಎಂದರು.
ವೈಚಾರಿಕ ವಿಚಾರಗಳು ಪರಸ್ಪರ ಚರ್ಚೆ ಮೂಲಕವೇ ನಡೆಯಬೇಕೇ ವಿನಾಃ ಹಿಂಸಾರೂಪದಲ್ಲಿ ನಡೆಯಕೂಡದು ಎಂದ ಸಚಿವ ಸುನಿಲ್, ಜಿಹಾದ್ ಹಿಂಸಾಚಾರ ಕೇವಲ ಮಂಗಳೂರಿಗೆ ಮಾತ್ರ ಸೀಮಿತವಲ್ಲ.
ರಾಜ್ಯದ ಹಲವು ಜಿಲ್ಲೆಗಳು ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸುವುದನ್ನು ಕಾಣಬಹುದು. ಕೆಲವು ವರ್ಷಗಳ ಹಿಂದೆ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿದ್ದ ಜಿಹಾದ್ ಹಿಂಸಾಚಾರ ಇಂದು ಪಶ್ಚಿಮ ಬಂಗಾಲ, ರಾಜಸ್ಥಾನ, ಕೇರಳ, ಕರ್ನಾಟಕ ಮೊದಲಾದೆಡೆಗಳಿಗೆ ವಿಸ್ತರಿಸುತ್ತಿದೆ. ಆ ಬಗ್ಗೆ ನಿರ್ದಿಷ್ಟ ಸಮುದಾಯದವರು ಯೋಚನೆ ಮಾಡಬೇಕು.
ಮುಸ್ಲಿಂ ರಾಷ್ಟ್ರಗಳೇ ಜಿಹಾದ್ ನಿಂದ ವಿಮುಖರಾಗುತ್ತಿರುವಾಗ ನಮ್ಮ ದೇಶದಲ್ಲಿ ಮಾತ್ರ ತಮ್ಮ ವಿಚಾರಗಳನ್ನು ಹಿಂಸಾಚಾರದ ಮೂಲಕ ಹರಡುತ್ತೇವೆ. ಆ ಮೂಲಕ ಮೇಲುಗೈ ಸಾಧಿಸುತ್ತೇವೆ ಎನ್ನುವುದನ್ನು ನಾಗರಿಕ ಸಮಾಜ ಒಪ್ಪಿಕೊಳ್ಳದು ಎಂದರು.
ಅಹಿತಕರ ಘಟನೆ ಕೈಗೊಳ್ಳುವವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಮತ್ತು ಜಿಹಾದಿ ಶಕ್ತಿಗಳ ವಿರುದ್ಧ ಸಮಾಜವೂ ಒಂದಾಗಬೇಕಾಗಿದೆ ಎಂದರು.
ಸುಳ್ಯ ಘಟನೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ರಾಜೀನಾಮೆ ಸರಿಯಲ್ಲ ಎಂದು ತಾನು ಎಂದೂ ಹೇಳಿಲ್ಲ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡಬೇಕು ಎಂಬುದನ್ನು ತಾನು ಮಂತ್ರಿಯಾಗಿ ಎನ್ನುವುದಕ್ಕಿಂತ ಮುಖ್ಯವಾಗಿ ಪಕ್ಷದ ಕಾರ್ಯಕರ್ತನಾಗಿ ಸಮ್ಮತಿಸುತ್ತೇನೆ. ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ ಎಂದರು.
ರಾಷ್ಟ್ರೀಯತೆ, ಅಭಿವೃದ್ಧಿಯನ್ನು ಯಾವುದೇ ಒಂದು ವರ್ಗದವರು ಒಪ್ಪುವುದು ಸರಿಯಲ್ಲ. ರಾಷ್ಟ್ರೀಯತೆ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜಿಹಾದಿಗಳ ಕಾರ್ಯಕ್ರಮ ಮತ್ತು ಇಸ್ಲಾಮೀಕರಣವನ್ನು ಜನತೆಯ ಮುಂದಿಡಲಾಗುವುದು. ಸಮಾಜ ಎಚ್ಚೆತ್ತುಕೊಳ್ಳದಿದ್ದಲ್ಲಿ ಯಾವುದೇ ಸರ್ಕಾರ ಏನೂ ಮಾಡಲು ಅಸಾಧ್ಯ.
ಹಿಂದುತ್ವದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.