Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಕರ್ನಾಟಕದಲ್ಲಿ ಬುಲ್ಡೋಜರ್ ಪ್ರಯೋಗ ಅನಗತ್ಯ

ಕರ್ನಾಟಕದಲ್ಲಿ ಬುಲ್ಡೋಜರ್ ಪ್ರಯೋಗ ಅನಗತ್ಯ

ಸುದ್ದಿಕಿರಣ ವರದಿ
ಮಂಗಳವಾರ, ಜೂನ್ 14

ಕರ್ನಾಟಕದಲ್ಲಿ ಬುಲ್ಡೋಜರ್ ಪ್ರಯೋಗ ಅನಗತ್ಯ
ಉಡುಪಿ: ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗ ಮಾಡುವಂಥ ಸನ್ನಿವೇಶ ಇದುವರೆಗೆ ಸೃಷ್ಟಿಯಾಗಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಬುಲ್ಡೋಜರ್ ಪ್ರಯೋಗ ಅನಗತ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ಇಲ್ಲಿ ಕಾನೂನು ಪಾಲಿಸುವ ಮನಃಸ್ಥಿತಿ ಇನ್ನೂ ಉಳಿದುಕೊಂಡಿದೆ ಎಂದರು.

ಈಗಾಗಲೇ ಗೋಹತ್ಯೆ ನಿಷೇಧದಂಥ ಕಾನೂನು ಜಾರಿಗೊಳಿಸಲಾಗಿದೆ. ಇನ್ನೂ ಮಂಡಿಸಲು ಹಲವು ವಿಧೇಯಕಗಳಿವೆ. ಮತಾಂತರ ನಿಷೇಧ ಕಾನೂನು ವಿಧಾನ ಪರಿಷತ್ ನಲ್ಲಿ ಒಪ್ಪಿಗೆ ಪಡೆಯಲು ಬಾಕಿ ಇದೆ ಎಂದರು.

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ದೇಶದಲ್ಲಿ ಕಾಂಗ್ರೆಸ್ ನವರಿಗೊಂದು ಕಾನೂನು, ಉಳಿದವರಿಗೊಂದು ಕಾನೂನು ಇಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನಿಖೆ ಇಡಿ ಎದುರಿಸಬೇಕು. ನಿರಪರಾಧಿಯಾಗಿದ್ದರೆ ಅವರು ಹೊರಬರುತ್ತಾರೆ, ಅಪರಾಧ ಮಾಡಿದ್ದರೆ ಶಿಕ್ಷೆಯಾಗುತ್ತದೆ. ಪ್ರತಿಭಟನೆ ಮಾಡುವ ಅವಶ್ಯಕತೆ ಇಲ್ಲ ಎಂದರು.

ಬಿಜೆಪಿ ಮುಂದಾಳು ಯಶಪಾಲ್ ಸುವರ್ಣ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆ ನೀಡುವ ಕುರಿತ ಪ್ರಶ್ನೆಗೆ ಅದನ್ನು ಪೊಲೀಸರು ನಿಭಾಯಿಸುತ್ತಾರೆ ಎಂದರು.

ಸೋಮವಾರ ಮೃತರಾದ ಬಿಜೆಪಿ ಹಿರಿಯ ನಾಯಕ ಎ.ಜಿ. ಕೊಡ್ಗಿ, ಪಂಚಾಯತ್ ರಾಜ್ ವ್ಯವಸ್ಥೆಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರು ನನಗೆ ತುಂಬಾ ಬೇಕಾದವರು. ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದ್ದೇವೆ ಎಂದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!