ಉಡುಪಿ: ರಾಜ್ಯ ಬಿಜೆಪಿ ಸರ್ಕಾರ ಘೋಷಣೆ ಮಾಡಿದ ಕೋವಿಡ್ ಪರಿಹಾರ ಪ್ಯಾಕೇಜ್ ನಲ್ಲಿ ಮೀನುಗಾರರನ್ನು ಪರಿಗಣಿಸದಿರುವುದು ಅವರಿಗೆ ಮಾಡಿದ ಮಹಾದ್ರೋಹ ಎಂದು ನಗರಸಭಾ ಸದಸ್ಯ ಹಾಗೂ ವಿಪಕ್ಷ ನಾಯಕ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ 2ನೇ ಅಲೆ ಬಂದು ಲಾಕ್ ಡೌನ್ ಘೋಷಣೆ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರ, ಪ್ರತೀ ಬಾರಿ ಕರಾವಳಿ ಭಾಗದಲ್ಲಿ ಮೀನುಗಾರರನ್ನು ಚುನಾವಣೆಯಲ್ಲಿ ತನ್ನ ಮತ ಬ್ಯಾಂಕ್ ನಂತೆ ಬಳಸಿ, ಇಂದಿನ ಕೊರೊನಾದ ಅತಿ ಸಂಕಷ್ಟ ಸಮಯದಲ್ಲಿ ಮರೆತುಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಕೆಂಡಾಮಂಡಲವಾಗಿದ್ದಾರೆ.
ರಾಜ್ಯದ ಎಲ್ಲಾ ಜನರಂತೆ ಮೀನುಗಾರರೂ ಬಹಳಷ್ಟು ಕಷ್ಟ ಅನುಭವಿಸುತ್ತಿದ್ದು, ಈಗಾಗಲೇ ಮತ್ಸ್ಯ ಕ್ಷಾಮದಿಂದ ಬಳಲುತ್ತಿದ್ದಾರೆ. ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಕುಟುಂಬ ಹಾಗೂ ಮತ್ಸ್ಯೋದ್ಯಮಿಗಳಿಗೆ ಲಾಕ್ ಡೌನ್ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಾಂಚನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರಾವಳಿ ಭಾಗದ ಮೂವರು ಸಂಸದರು, ಅವಿಭಜಿತ ದ.ಕ. ಜಿಲ್ಲೆಯ 12 ಮಂದಿ ಬಿಜೆಪಿ ಶಾಸಕರನ್ನು ಗೆಲ್ಲಿಸುವಲ್ಲಿ ಮೀನುಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೂ ಇಂಥ ಕಠಿಣ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡದೆ ಬಿಜೆಪಿ ಸರ್ಕಾರ ಮೋಸ ಮಾಡಿದೆ.
ಕೇಂದ್ರದ ಮಲತಾಯಿ ಧೋರಣೆ
ಕೇಂದ್ರಕ್ಕೆ 25 ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳಿಸಿದರೂ ರಾಜ್ಯಕ್ಕೆ ನಿರಂತರ ಮಲತಾಯಿ ಧೋರಣೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ, ಈಚೆಗೆ ಕರ್ನಾಟಕ ಕರಾವಳಿ ಭಾಗದಲ್ಲಿ ಸಾಕಷ್ಟು ನಷ್ಟವನ್ನುಂಟು ಮಾಡಿರುವ ತೌಕ್ತೆ ಚಂಡಮಾರುತ ಬೇರೆ ರಾಜ್ಯಗಳಲ್ಲೂ ಹಾನಿ ಮಾಡಿದೆ. ಆದರೆ, ಪ್ರಧಾನಿ ಮೋದಿ ಕೇವಲ ಗುಜರಾತಿಗೆ ಸಾವಿರ ಕೋಟಿ ಪರಿಹಾರ ಘೋಷಿಸಿರುವುದು ಖೇದಕರ.
ಕರಾವಳಿ ಭಾಗಕ್ಕೆ ಚಂಡಮಾರುತದಿಂದಾದ ನಷ್ಟ ವೀಕ್ಷಿಸಲು ಬಂದ ಸಚಿವ ಆರ್. ಅಶೋಕ್ ಜನರ ಕಷ್ಟ ಆಲಿಸದೇ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಈ ತಾರತಮ್ಯ ಪ್ರಶ್ನಿಸದೆ ವಿಷಯಾಂತರ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಕಲಿಸಲಿದ್ದಾರೆ ಎಂದು ರಮೇಶ್ ಕಾಂಚನ್ ಎಚ್ಚರಿಕೆ ನೀಡಿದ್ದಾರೆ