Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಹಿಂದುಳಿದ ವರ್ಗಗಳಿಗೆ ಪ್ಯಾಕೇಜ್ ನೀಡದ ಸರ್ಕಾರ

ಹಿಂದುಳಿದ ವರ್ಗಗಳಿಗೆ ಪ್ಯಾಕೇಜ್ ನೀಡದ ಸರ್ಕಾರ

ಉಡುಪಿ: ಕಾಂಗ್ರೆಸ್ ನ ತೀವ್ರ ಒತ್ತಡ ಮತ್ತು ಆಗ್ರಹದ ಪರಿಣಾಮವಾಗಿ ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ಎರಡನೇ ಅಲೆಯ ಲಾಕ್ ಡೌನ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತಾಸಕ್ತಿ ಕಾಪಾಡದೇ ನಿರ್ಲಕ್ಷಿಸಿರುವುದು ವಿಷಾದನೀಯ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದ್ದಾರೆ.

ಪ್ರಮುಖ ಹಿಂದುಳಿದ ವರ್ಗಗಳಲ್ಲೊಂದಾದ ಬಿಲ್ಲವ ಸಮುದಾಯದ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಹಣಕಾಸು ನೆರವು ನೀಡಿ ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳನ್ನು ಉತ್ತೇಜಿಸುವ ಆಶ್ವಾಸನೆ ಕಾರ್ಯಗತಗೊಂಡಿದ್ದರೆ ಈ ಸಂದರ್ಭದಲ್ಲಿ ಪ್ರಯೋಜನವಾಗುತ್ತಿತ್ತು. ಆದರೆ, ಇಂದಿಗೂ ಅದರ ಘೋಷಣೆಯೂ ಆಗದೆ, ಕಾರ್ಯಗತವೂ ಆಗದೆ ಕೇವಲ ಆಶ್ವಾಸನೆಯಾಗಿಯೇ ಉಳಿಯುವ ಮೂಲಕ ಹಾಗೂ ಲಾಕ್ ಡೌನ್ ಪ್ಯಾಕೇಜ್ ನಲ್ಲಿಯೂ ಬಿಲ್ಲವ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಸೊರಕೆ ನೊಂದು ನುಡಿದಿದ್ದಾರೆ.

ತಮ್ಮ ಜೀವದ ಹಂಗು ತೊರೆದು ಜೀವನೋಪಾಯಕ್ಕಾಗಿ ಮೀನುಗಾರಿಕೆ ವೃತ್ತಿ ನಡೆಸುವ ಮೊಗವೀರರು ಹಾಗೂ ಮೀನು ವ್ಯಾಪಾರ ನಡೆಸುವ ಇತರ ವೃತ್ತಿ ಬಾಂಧವರಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡದೆ ದ್ರೋಹ ಎಸಗಲಾಗಿದೆ

ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯದೇ ಇರುವುದರಿಂದ ದೇವಾಡಿಗ ಸಮುದಾಯದವರು ಯಾವುದೇ ಆದಾಯದ ಮೂಲವಿಲ್ಲದೇ ಸಂಕಷ್ಟದಲ್ಲಿದ್ದರೂ ಸರ್ಕಾರದ ಸಹಾಯ ಅವರಿಗೆ ಇಲ್ಲವಾಗಿದೆ. ತಮ್ಮ ಕುಲಕಸುಬನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿರುವ ಕುಂಬಾರ ಸಮಾಜ ಹಾಗೂ ಮರದ ಕೆಲಸ ಮತ್ತು ಕಬ್ಬಿಣದ ಕೆಲಸ ಮಾಡಿ ದುಡಿಮೆ ಮಾಡುತ್ತಿರುವ ವಿಶ್ವಕರ್ಮ ಸಮಾಜದವರಿಗೆ ಯಾವುದೇ ರೀತಿಯ ಪ್ಯಾಕೇಜ್ ನೀಡದಿರುವುದು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿತೋರಿಸುತ್ತಿದೆ ಎಂದು ಸೊರಕೆ ಕಿಡಿ ಕಾರಿದ್ದಾರೆ.

ಅದೇ ರೀತಿ ಹಿಂದುಳಿದ ವರ್ಗಗಳ ಜಾತಿಗಳಾದ ಶೆಟ್ಟಿಗಾರ, ಗಾಣಿಗ ಮತ್ತು ಜೋಗಿ ಹಾಗೂ ಅಲ್ಪಸಂಖ್ಯಾತ ಸಮುದಾಯ ಹಾಗೂ ಬೀಡಿ ಕಾರ್ಮಿಕರು ಮತ್ತು ಎಲ್ಲಾ ಸಮಾಜದಲ್ಲಿ ದುಡಿಮೆ ಮಾಡುತ್ತಿರುವವರಿಗೆ ಪ್ಯಾಕೇಜ್ ನೀಡದೆ ಕಡೆಗಣಿಸಲಾಗಿದೆ ಅದೇ ರೀತಿ ದೇವಸ್ಥಾನ, ಗರಡಿಗಳಲ್ಲಿ ಕೆಲಸ ಮಾಡುವ ಅರ್ಚಕರು ಮತ್ತು ಚಾಕರಿ ಮಾಡುವವರನ್ನು ಹಾಗೂ ನಲ್ಕೆಯವರನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಸಹಾಯಧನ ಘೋಷಿಸದೇ ವಂಚಿಸಲಾಗಿದೆ.

ಇದೀಗ ಘೋಷಣೆ ಮಾಡಿರುವ 1,500 ರೂ., 3 ಸಾವಿರ ರೂ.ಗಳ ಪ್ಯಾಕೇಜ್ ಇಂದಿನ ದುಬಾರಿ ದಿನಸಿ ಸಾಮಾಗ್ರಿ, ಆಡುಗೆ ಅನಿಲದ ಮುಂದೆ ತೀರಾ ಅತ್ಯಲ್ಪವಾಗಿದ್ದು ಈ ಮೊತ್ತ ಹೆಚ್ಚಿಸಿ ಎಲ್ಲ ಹಿಂದುಳಿದ ವರ್ಗಗಳು ಮತ್ತು ಪ. ಜಾತಿ ಮತ್ತು ಪಂಗಡಗಳ ಜನರಿಗೂ ವಿಸ್ತರಿಸಬೇಕೆಂದು ಸೊರಕೆ ಆಗ್ರಹಿಸದ್ದಾರೆ.

ಮುಖ್ಯಮಂತ್ರಿ 1,250 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೇನೆಂದು ಮಾಧ್ಯಮಗಳು, ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ವೈಭವೀಕರಿಸುತ್ತಿದ್ದು, ನೆರೆಯ ಹಾಗೂ ಅತಿ ಸಣ್ಣ ರಾಜ್ಯವಾದ ಕೇರಳದಲ್ಲಿ 20 ಸಾವಿರ ಕೋ. ರೂ. ಪ್ಯಾಕೇಜನ್ನು ಜನಸಾಮಾನ್ಯರಿಗೆ ನೀಡಿರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಯಬೇಕಾಗಿದೆ ಎಂದು ಸೊರಕೆ ಕಿವಿಮಾತು ಹೇಳಿದ್ದಾರೆ.

ಪ್ಯಾಕೇಜ್ ಹಣವನ್ನು ಮುಖ್ಯಮಂತ್ರಿ ಅಥವಾ ಸಚಿವರ ಕೈಯಿಂದ ನೀಡುತ್ತಿಲ್ಲ. ಇದು ಜನರ ತೆರಿಗೆ ಹಣದಿಂದ ನೀಡುವಂಥದ್ದು. ಆದ್ದರಿಂದ ಶೀಘ್ರ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು. ಪ್ಯಾಕೇಜ್ ಪಡೆಯಲು ನಿಗದಿಪಡಿಸಿರುವ ಅರ್ಹತೆ ಮತ್ತು ನಿಯಮಗಳನ್ನು ಸಡಿಲುಗೊಳಿಸಬೇಕು. ಇಲ್ಲವಾದಲ್ಲಿ ಒಟ್ಟು ಶೇ. 10ರಷ್ಟು ಫಲಾನುಭವಿಗಳಿಗೂ ತಮ್ಮ ಪ್ಯಾಕೇಜ್ ತಲುಪುವುದು ಕಷ್ಟಕರವಾದೀತು ಎಂದು ಮಾಜಿ ಸಚಿವ ಸೊರಕೆ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆಯ ಪ್ಯಾಕೇಜ್ ಕೂಡಾ ಘೋಷಣೆಗಷ್ಟೇ ಸೀಮಿತವಾಗಿರದೆ ರೋಗ ಹತೋಟಿಯೊಂದಿಗೆ ಸಾರ್ವಜನಿಕರ ಹಸಿವು ನೀಗಿಸುವ ಕೆಲಸವಾಗಬೇಕು ಎಂದು ಸೊರಕೆ ಆಶಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!