ಪೊಲೀಸ್ ಠಾಣೆಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಬ್ರೇಕ್
(ಸುದ್ದಿಕಿರಣ ವರದಿ)
ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ಇನ್ನು ಮುಂದೆ ಬರ್ತ್ ಡೇ ಆಚರಣೆ, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗಾವಣೆ, ಮುಂಬಡ್ತಿ ವೇಳೆ ಸ್ವಾಗತ, ಬೀಳ್ಕೊಡುಗೆ ಕಾರ್ಯಕ್ರಮ ನಡೆಸುವಂತಿಲ್ಲ.
ಇದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ನೀಡಿದ ಸೂಚನೆ.
ಪೊಲೀಸ್ ಅಧಿಕಾರಿಗಳು ಸಮಾಜಘಾತುಕ ವ್ಯಕ್ತಿಗಳೊಂದಿಗೆ ಸಭೆ, ಸಮಾರಂಭಗಳಲ್ಲಿ ಭಾಗವಹಿಸದೆ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಶಿಸ್ತು ಪಾಲನೆಗೆ ಸೂದ್ ಖಡಕ್ ಸೂಚನೆ ನೀಡಿದ್ದಾರೆ.
ಈಚಿನ ದಿನಗಳಲ್ಲಿ ಖಾಸಗಿ ಸಮಾರಂಭಗಳಲ್ಲಿ ಪೊಲೀಸರು ಭಾಗವಹಿಸುತ್ತಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಪೊಲೀಸರು ಭಾಗಿಯಾಗುವುದು, ಠಾಣೆಗಳಲ್ಲಿ ಹುಟ್ಟುಹಬ್ಬ, ವಾರ್ಷಿಕೋತ್ಸವ ಆಚರಣೆ ಇತ್ಯಾದಿಗಳ ಬಗ್ಗೆ ಸಾರ್ವಜನಿಕರಿಂದಲೂ ಟೀಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾರ್ಗಸೂಚಿ ಹೊರಡಿಸಿದ ಡಿಜಿಐಜಿಪಿ ರೌಡಿಶೀಟರ್, ಸಮಾಜಘಾತುಕ ವ್ಯಕ್ತಿಗಳು, ಅಪರಾಧ ಹಿನ್ನೆಲೆಯುಳ್ಳವರೊಂದಿಗೆ ಅಧಿಕಾರಿ ಮತ್ತು ಸಿಬ್ಬಂದಿ ಯಾವುದೇ ರೀತಿಯ ಸಂಬಂಧ ಹೊಂದಿರುವಂತಿಲ್ಲ. ಪೊಲೀಸ್ ಠಾಣೆ, ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ, ಎಸಿಪಿ ಕಚೇರಿಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಇತ್ಯಾದಿ ಖಾಸಗಿ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಸೂಚಿಸಿದ್ದಾರೆ.
ಠಾಣೆಗಳಿಗೆ ಹೊಸತಾಗಿ ಬರುವ ಅಧಿಕಾರಿಗಳು, ಸಿಬ್ಬಂದಿಗಳ ವರ್ಗಾವಣೆ, ಮುಂಬಡ್ತಿ ವೇಳೆ ಸ್ವಾಗತ ಮತ್ತು ಬೀಳ್ಕೊಡುಗೆ ಕಾರ್ಯಕ್ರಮಗಳನ್ನು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ, ಕೇವಲ ಪೊಲೀಸ್ ಸಿಬ್ಬಂದಿ ಹೊರತುಪಡಿಸಿ ಖಾಸಗಿ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಖಾಸಗಿ ಕಾರ್ಯಕ್ರಮಗಳಲ್ಲಿ ಪೊಲೀಸರು ಸಮವಸ್ತ್ರ ಧರಿಸುವಂತಿಲ್ಲ. ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಸಭೆ ಸಮಾರಂಭಗಳಿಗೆ ಸಿಬ್ಬಂದಿಯಿಂದ ಹಣ ಸಂಗ್ರಹಿಸುವಂತಿಲ್ಲ ಎಂದೂ ಪ್ರವೀಣ್ ಸೂದ್ ತಿಳಿಸಿದ್ದಾರೆ.