ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರವಿಲ್ಲ; ಶಾಸಕನಾಗಿ ಜನ ಸೇವೆ ಮಾಡುವೆ
(ಸುದ್ದಿಕಿರಣ ವರದಿ)
ಕುಂದಾಪುರ: ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ನೀಡದಿರುವುದಕ್ಕೆ ಬೇಸರ ಇಲ್ಲ. ಶಾಸಕನಾದವ ಮಂತ್ರಿಯಾಗಿಯೇ ಸಾಯಬೇಕೆಂದೇನೂ ಇಲ್ಲ ಎಂದು ಹೇಳಿದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕನಾಗಿ ಜನ ಸೇವೆ ಮಾಡಿ ಕ್ಷೇತ್ರದ ಜನತೆಯ ಋಣ ತೀರಿಸುವುದಾಗಿ ತಿಳಿಸಿದರು.
ನಾನೆಂದೂ ಮಾನಸಿಕ ಸಮತೋಲನ ಕಳೆದುಕೊಂಡವನಲ್ಲ. ಸಚಿವ ಸ್ಥಾನ ನೀಡದಿರುವ ವಿರುದ್ಧ ಏನೂ ಪ್ರತಿಕ್ರಿಯಿಸಲಾರೆ. ಅದರಿಂದ ನನಗೆ ದುಃಖವೂ ಇಲ್ಲ, ಸಂತೋಷವೂ ಇಲ್ಲ. ಎಲ್ಲ ಜಾತಿ, ಧರ್ಮದವರ ಮತ ಪಡೆದು ಜನಪ್ರತಿನಿಧಿಯಾದವನು ಜಾತಿ, ಧರ್ಮದ ಆಧಾರದಲ್ಲಿ ಸ್ಥಾನ ಮಾನ ಕೇಳುವುದು ಸರಿಯಲ್ಲ. ಅಂಥವರು ಜಾತಿ ಸಂಘಟನೆ ಚುನಾವಣೆಗೆ ನಿಲ್ಲಬೇಕು ಎಂದರು.
ನಮ್ಮ ಜಿಲ್ಲೆಯಲ್ಲಿಯೂ ಕೆಲವರು ಜಾತಿವಾದಿ ರಾಜಕಾರಣಿಗಳಿದ್ದಾರೆ. ಪ್ರಾಮಾಣಿಕ ರಾಜಕಾರಣಿ ಎಂದು ಬಿಂಬಿಸುವ ಜನಪ್ರತಿನಿಧಿಗಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಹಾಲಾಡಿ, ಮನೆಯಿಂದ ಹೊರಡುವಾಗ ಗರಿಮುರಿ ಇಸ್ತ್ರಿ ಹಾಕಿದ ಬಟ್ಟೆ ಹಾಕಿಕೊಂಡು ಜನರ ಬಳಿ ತೆರಳುವಾಗ ಹಾಕಿಕೊಂಡ ಬಟ್ಟೆ ಮುದ್ದೆ ಮಾಡಿಕೊಂಡು ಹುಲ್ಲಿನ ಮನೆಯಲ್ಲಿರುವವರಂತೆ ನಟಿಸುವವರೂ ಇದ್ದಾರೆ ಎಂದು ಕುಹಕವಾಡಿದರು.
ತನಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸುವುದು ಸರಿಯಲ್ಲ. ಅಂಥ ಪ್ರತಿಭಟನೆಗಳಿಗೆ ನನ್ನ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದರು