Sunday, October 2, 2022
Home ಸಮಾಚಾರ ಜಿಲ್ಲಾ ಸುದ್ದಿ ನುಲಿಯ ಚಂದಯ್ಯ ವಚನ ಸಾರ್ವಕಾಲಿಕ

ನುಲಿಯ ಚಂದಯ್ಯ ವಚನ ಸಾರ್ವಕಾಲಿಕ

ಸುದ್ದಿಕಿರಣ ವರದಿ
ಶುಕ್ರವಾರ, ಆಗಸ್ಟ್ 12

ನುಲಿಯ ಚಂದಯ್ಯ ವಚನ ಸಾರ್ವಕಾಲಿಕ
ಉಡುಪಿ: ನುಲಿಯ ಚಂದಯ್ಯ ಅವರ ವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಅದನ್ನು ಎಲ್ಲರೂ ಪಾಲಿಸಬೇಕು. ನುಲಿಯ ಚಂದಯ್ಯರಂತೆ ನಾವು ನಮ್ಮ ಕರ್ತವ್ಯಗಳನ್ನು ಅರಿತು ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೆಚ್ಚವರಿ ಜಿಲ್ಲಾಧಿಕಾರಿ ವೀಣಾ ಬಿ. ಎನ್. ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ನುಲಿಯ ಚಂದಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನ ಕಾಲಘಟ್ಟದಲ್ಲಿ ವಚನ ಸಾಹಿತ್ಯ, ವೈಚಾರಿಕ ಕ್ರಾಂತಿಯ ಮೂಲಕ ಸಮಾಜಕ್ಕೆ ಹೊಸ ತಿರುವು ನೀಡಿದ್ದು, ವಚನಕಾರರಾದ ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಮೊದಲಾದ ಪ್ರಸಿದ್ಧ ವಚನಕಾರರು ತಮ್ಮ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ.

ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತ್ರಿಪದಿಗಳ ಮೂಲಕ ವಚನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅಂಥ ಶ್ರೇಷ್ಠ ವಚನಕಾರರಲ್ಲಿ ನುಲಿಯ ಚಂದಯ್ಯ ಕೂಡಾ ಕಾಯಕ ನಿಷ್ಠೆ ಹೊಂದಿದವರಾಗಿದ್ದು, ಬಸವಣ್ಣನವರ ವಿನೂತನ ವಿಚಾರಧಾರೆ, ಚಿಂತನೆಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ಬಂದು ಶ್ರೇಷ್ಠ ಕಾಯಕ ಜೀವಿ ವಚನಕಾರರೆನಿಸಿಕೊಂಡಿದ್ದಾರೆ ಎಂದರು.

ಅರಣ್ಯದಲ್ಲಿ ಬೆಳೆದ ಹುಲ್ಲಿನಿಂದ ಹಗ್ಗವನ್ನು ಹೊಸೆದು ಮಾರಿ ಬಂದ ಹಣದಿಂದ ಜೀವನ ನಡೆಸುತ್ತಿದ್ದ ನುಲಿಯ ಚಂದಯ್ಯ ಅವರ ಅನೇಕ ವಚನಗಳನ್ನು ವಚನ ಸಾಹಿತ್ಯದ ಪಿತಾಮಹ ಡಾ| ಫ. ಗು. ಹಳಕಟ್ಟಿ ಸಂಗ್ರಹಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೇಂಪೇಗೌಡ, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ರವೀಂದ್ರ, ಪರೀಕ್ಷಾರ್ಥಿ ಅಧಿಕಾರಿ ನೀಲಾಬಾಯಿ ಲಮಾಣಿ, ಉಪ ತಹಶೀಲ್ದಾರ್ ಸಂಪತ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!