ಶಿರ್ವ: ಅನಾದಿ ಕಾಲದಿಂದಲೂ ಕೃಷಿಯೇ ಮಾನವನ ಕುಲಕಸುಬಾಗಿತ್ತು. ಆದರೆ, ಆಧುನಿಕತೆ ಬೆಳೆದಂತೆ ಮನುಷ್ಯ ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡ ಕಾರಣ ಕೃಷಿ ಹಿಂದುಳಿಯಿತು. ಆದರೆ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕೃಷಿ ಕಾಯಕ ಇಂದು ಸಾಗುತ್ತಿದೆ. ಈ ನಿಟ್ಟಿನಲ್ಲಿ ಯುವಜನತೆ ಭಾಗವಹಿಸುವ ಮೂಲಕ ನೆಲ ಜಲ ಸಂರಕ್ಷಣೆ ಮಾಡಿದಲ್ಲಿ ಮುಂದಿನ ಜನಾಂಗಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ರೋಟರಿ ಸದಸ್ಯ ರಾಘವೇಂದ್ರ ನಾಯಕ್ ಹೇಳಿದರು.
ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗ್ರೀನ್ ಟೀಚರ್ ಫೋರಂ ಸಹಭಾಗಿತ್ವದಲ್ಲಿ ಎನ್.ಎಸ್.ಎಸ್, ಎನ್.ಸಿ.ಸಿ, ರೋವರ್ಸ್ & ರೇಂಜರ್ಸ್ ಮತ್ತು ರೆಡ್ ಕ್ರಾಸ್ ಹಾಗೂ ರೋಟರಿ ಶಿರ್ವ ಸಂಯುಕ್ತಾಶ್ರಯದಲ್ಲಿ ಕುಂಜಿಗುಡ್ಡೆ ಪಿಲಾರ್ ಫೆಡ್ರಿಕ್ ಕ್ಯಾಸ್ತಲಿನೊ ಮತ್ತು ಹೆಲೆನ್ ಕ್ಯಾಸ್ತಲಿನೊ ಗದ್ದೆಯಲ್ಲಿ ನಡೆದ ನೇಜಿ ನಾಟಿ ಕಾರ್ಯಕ್ರಮದ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.
ನಾವು ಸಮಾಜಮುಖಿಯಾಗಿ ಬೆಳೆಯಬೇಕು. ವಿದ್ಯಾರ್ಥಿಗಳು ಸಮಾಜ ಮತ್ತು ಕಾಲೇಜನ್ನು ಬೆಸೆಯುವ ಕೊಂಡಿಗಳು. ಆದ್ದರಿಂದ ಸಾಮಾಜಿಕ ಕೊಡು- ಕೊಳ್ಳುವಿಕೆ ಆರೋಗ್ಯಪೂರ್ಣ ಪರಿಸರ ನಿರ್ಮಿಸಲು ಸಹಕಾರಿ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಮಾಜಸೇವೆ ನಿರಂತರವಾದಾಗ ಉತ್ತಮ ಸಮಾಜದ ಸಹಭಾಗಿತ್ವಕ್ಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮದ ರೂವಾರಿಗಳಾದ ಕಾಲೇಜಿನ ಹಳೆವಿದ್ಯಾರ್ಥಿ ಜಾಕ್ಸನ್ ಹಾಗೂ ಇತರರ ಸಹಕಾರ ಶ್ಲಾಘನೀಯ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ| ಹೆರಾಲ್ಡ್ ಐವನ್ ಮೋನಿಸ್ ಹೇಳಿದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರೀನ್ ಟೀಚರ್ ಫೋರಂ ಸಂಯೋಜಕಿ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ ನಿರ್ದೇಶಕಿ ಯಶೋದ, ನಮ್ಮ ಮುಂದಿನ ಪೀಳಿಗೆ ಮಣ್ಣಿನ ಸಂಬಂಧ ಉಳಿಸಿಕೊಳ್ಳುವುದರ ಜೊತೆಗೆ ಕೃಷಿ ಕಾರ್ಯಗಳಲ್ಲಿ ಭಾಗಿಯಾಗಿ ಸಮಾಜಸೇವೆ ಮಾಡುವುದು, ಕೃಷಿ ಸಂಬಂಧಿ ಕಲಿಕೆ ಈ ಕಾರ್ಯಕ್ರಮದ ಆಶಯ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಶಿರ್ವ ಕಾರ್ಯದರ್ಶಿ ಜಿನೇಶ್ ಬಳ್ಳಾಲ್, ಪತ್ರಕರ್ತ ಹಾಗೂ ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಕಾಲೇಜಿನ ಎನ್.ಸಿ.ಸಿ ಘಟಕ ಅಧಿಕಾರಿ ಲೆ| ಕೆ. ಪ್ರವಿಣ್ ಕುಮಾರ್, ಎನ್. ಎಸ್. ಎಸ್. ಘಟಕ ಸಂಯೋಜಕ ಪ್ರೇಮನಾಥ್, ರೇಂಜರ್ಸ್ & ರೋವರ್ಸ್ ಘಟಕದ ಪ್ರಕಾಶ್ ಮತ್ತು ಸಂಗೀತಾ, ರೆಡ್ ಕ್ರಾಸ್ ಘಟಕದ ಮುರಳಿ, ಶಿಕ್ಷಕರ ಸಂಘ ಕಾರ್ಯದರ್ಶಿ ರೀಮಾ ಲೋಬೊ, ಹಿರಿಯ ಉಪನ್ಯಾಸಕ ವಿಠಲ್ ನಾಯಕ್ ಮೊದಲಾದವರಿದ್ದರು.
ನಾಟಿ ಕಾರ್ಯಕ್ಕೆ ಗದ್ದೆ ಒದಗಿಸಿದ ಫೆಡ್ರಿಕ್ ಕ್ಯಾಸ್ತಲಿನೊ ಅವರಿಗೆ ಕಾಲೇಜು ಪ್ರಾಂಶುಪಾಲರು ನೆನಪಿನ ಕಾಣಿಕೆಯಾಗಿ ಸಸಿ ನೀಡಿದರು