Monday, July 4, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ `ದೇಶ ಮೊದಲು ನಿಲುವು ಅನುಕರಣೀಯ'

`ದೇಶ ಮೊದಲು ನಿಲುವು ಅನುಕರಣೀಯ’

ಉಡುಪಿ: ಅಯೋಧ್ಯೆ ಶ್ರೀ ರಾಮ ಮಂದಿಯ ನಿರ್ಮಾಣಕ್ಕೆ ಪೂರಕವಾಗಿ ಪುರಾತತ್ವ ಇಲಾಖೆ ಒದಗಿಸಿದ ದಾಖಲೆ ಆಧಾರದಲ್ಲಿ ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದು, ಅದರ ಹಿಂದೆ ಪುರಾತತ್ವ ಶಾಸ್ತ್ರಜ್ಞ ಡಾ| ಕೆ. ಕೆ. ಮುಹಮ್ಮದ್ ಶ್ರಮ ದೊಡ್ಡದು. ಧರ್ಮ, ಜಾತಿ, ವರ್ಗ, ಭಾಷೆ ಇತ್ಯಾದಿಗಳನ್ನು ಮೀರಿ ಇತಿಹಾಸದ ದಾಖಲೆಯನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿಕೊಡುವಲ್ಲಿ ಮುಹಮ್ಮದ್ ಯಶಸ್ವಿಯಾಗಿದ್ದಾರೆ. `ದೇಶ ಮೊದಲು’ ಎಂಬ ಅವರ ನಿಲುವು ಅನುಕರಣೀಯ. ರಾಮ ಜನ್ಮಭೂಮಿಯಂಥ ಸಮಸ್ಯೆ ಪರಿಹಾರಗೊಳ್ಳಲು ಮುಹಮ್ಮದ್ ಅವರಂಥ ದೇಶಪ್ರೇಮಿಗಳ ಕೊಡುಗೆ ಕಾರಣ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಡಾ| ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ವಿದ್ಯೋದಯ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಭಾನುವಾರ ನಡೆದ ಪುರಾತತ್ವ ತಜ್ಞ ಪದ್ಮಶ್ರೀ ಡಾ| ಕೆ. ಕೆ. ಮುಹಮ್ಮದ್ ಅವರಿಗೆ ಒಂದು ಲಕ್ಷ ರೂ. ನಗದು ಸಹಿತ ಪಾದೂರು ಡಾ| ಗುರುರಾಜ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ರಾಮ ಮಂದಿರ ನಿರ್ಮಾಣಕ್ಕೆ ಕೈಹಾಕಿದಲ್ಲಿ ದೇಶದಲ್ಲಿ ರಕ್ತದೋಕುಳಿ ಹರಿಯಲಿದೆ ಎಂಬ ಎಚ್ಚರಿಕೆ ನೀಡಿದವರೆಲ್ಲ ರಾಮ ಮಂದಿರ ತೀರ್ಪು ಹೊರಬರುತ್ತಿದ್ದಂತೆಯೇ ರಾಗ ಬದಲಿಸಬೇಕಾಯಿತು ಎಂದು ಸಚಿವ ಕೋಟ ವ್ಯಂಗ್ಯವಾಡಿದರು.

ಡಾ| ಪಾದೂರು ಗುರುರಾಜ ಭಟ್ಟರು ಬಿಟ್ಟುಹೋದ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅವರ ಕೃತಿಗಳನ್ನು ಹಿಂದುಳಿದ ವರ್ಗಗಳ ಇಲಾಖೆಯಿಂದ ಪ್ರಕಟಿಸಲು ಕ್ರಮ ಕೈಕೊಳ್ಳಲಾಗುವುದು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುರಾಜ ಭಟ್ಟರ ಹೆಸರಿನಲ್ಲಿ ಪೀಠ ಸ್ಥಾಪನೆ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸುವುದಾಗಿ ತಿಳಿಸಿದ ಅವರು, ವರದಿ ಪೂರಕವಾಗಿದ್ದಲ್ಲಿ ಕೂಡಲೇ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಮಥುರಾ, ಕಾಶಿಯಲ್ಲೂ ಉತ್ಖನನ ನಡೆಯಲಿ
ಸಾನ್ನಿಧ್ಯ ವಹಿಸಿ ಪ್ರಶಸ್ತಿ ಪ್ರದಾನ ಮಾಡಿದ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಭೂಗರ್ಭದಲ್ಲಿ ಹುದುಗಿದ್ದ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದಿಟ್ಟು ರಾಮ ಮಂದಿರ ಪರ ತೀರ್ಪು ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮುಹಮ್ಮದ್ ಅಭಿನಂದನಾರ್ಹರು ಎಂದರು.

ಮಥುರಾದಲ್ಲಿ ಕೃಷ್ಣ ದೇವಸ್ಥಾನ, ಕಾಶಿಯಲ್ಲಿ ವಿಶ್ವನಾಥ ದೇವಸ್ಥಾನಗಳಿದ್ದು ಅವುಗಳ ಉತ್ಖನನ ಕೂಡಾ ನಡೆಯಲಿ. ಪೂರಕ ಸಾಕ್ಷ್ಯ ಕಲೆಹಾಕುವಂತಾಗಲಿ ಎಂದು ಆಶಿಸಿದ ಪಲಿಮಾರು ಶ್ರೀಗಳು, ಹಿಂದೂಗಳಿಗೆ ಕೃಷ್ಣ ಹಾಗೂ ವಿಶ್ವನಾಥನ ದೇವಸ್ಥಾನ ಕಾಣುವ ಭಾಗ್ಯ ಲಭಿಸುವಂತಾಗಲಿ ಎಂದರು.

ಶಾಸಕ ರಘುಪತಿ ಭಟ್, ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಕೆ. ಭೈರಪ್ಪ, ಡಾ| ಪಾದೂರು ಗುರುರಾಜ ಭಟ್ ಟ್ರಸ್ಟ್ ಅಧ್ಯಕ್ಷ ಪ್ರೊ. ಪಿ. ಶ್ರೀಪತಿ ತಂತ್ರಿ, ಅಧ್ಯಕ್ಷೆ ಪಾರ್ವತಿ ಭಟ್ ಇದ್ದರು.

ವಿದ್ಯಾಲಕ್ಷ್ಮಿ ಪ್ರಶಸ್ತಿ ಪತ್ರ ವಾಚಿಸಿದರು. ಜಿ. ವಾಸುದೇವ ಭಟ್ ಸ್ವಾಗತಿಸಿ, ನಿರೂಪಿಸಿದರು.

ಸಿದ್ಧರಾಮಯ್ಯ ಹೇಳಿಕೆ ನಾಚಿಕೆಗೇಡು
ಅಯೋಧ್ಯೆ ರಾಮ ಮಂದಿರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದ್ದರೂ `ವಿವಾದಿತ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ’ ಎಂಬ ಸ್ವತಃ ವಕೀಲರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನಾಚಿಕೆಗೇಡು ಎಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅಸಮಾಧಾನ ವ್ಯಕ್ತಪಡಿಸಿದರು.

`ವಿವಾದಿತ ಜಾಗದಲ್ಲಿ ರಾಮಮಂದಿರ ಇತ್ತು ಎಂಬ ಬಗ್ಗೆ ಸಾಕಷ್ಟು ಪುರಾವೆ ಲಭ್ಯವಾಗಿವೆ. ಸುಪ್ರೀಂಕೋರ್ಟ್ನ ಐವರು ನ್ಯಾಯಾಧೀಶರು ಸಹಮತದ ತೀರ್ಪು ನೀಡಿದ್ದಾರೆ. ಇಷ್ಟಾದರೂ ಜಾಗವನ್ನು ವಿವಾದಿತ ಎನ್ನುವುದು ಸರಿಯಲ್ಲ. ರಾಮಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ ಎಂದು ಹೇಳಲಿ, ಆದರೆ, `ವಿವಾದಿತ’ ರಾಮಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ ಎಂಬ ಪದ ಬಳಕೆ ಕೂಡದು ಎಂದು ಶ್ರೀಗಳು ಸಲಹೆ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!