Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಏಪ್ರಿಲ್ ತಿಂಗಳು ಪರಿವರ್ತನಾ ಮಾಸಾಚರಣೆ

ಏಪ್ರಿಲ್ ತಿಂಗಳು ಪರಿವರ್ತನಾ ಮಾಸಾಚರಣೆ

ಉಡುಪಿ: ಬಾಬಾ ಸಾಹೇಬ್ ಅಂಬೇಡ್ಕರ್ ಹುಟ್ಟಿದ ಏಪ್ರಿಲ್ ತಿಂಗಳನ್ನು ಪರಿವರ್ತನಾ ಮಾಸವನ್ನಾಗಿ ಆಚರಿಸಲಾಗುವುದು. ಅವರ ಜನ್ಮದಿನ ಏ. 14ರಂದು ರಾಜ್ಯದ 310 ಬಿಜೆಪಿ ಮಂಡಲಗಳಲ್ಲಿಯೂ ಪಾದಯಾತ್ರೆ ನಡೆಸಲುದ್ದೇಶಿಸಲಾಗಿದೆ ಎಂದು ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪರಿವರ್ತನಾ ಮಾಸವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ದಲಿತರ ಹಾಸ್ಟೆಲ್, ಕೇರಿ, ಸಮುದಾಯ ಭವನಗಳಲ್ಲಿ ನವೀಕರಣ, ಆರೋಗ್ಯ ಕಾರ್ಯಕ್ರಮ, ದಲಿತರಿಗೆ ಸಹಾಯ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಏ. 14ರಂದು ಬಿಜೆಪಿ ಕಾರ್ಯಕರ್ತರು ಅಂಬೇಡ್ಕರ್ ಭಾವಚಿತ್ರದೊಂದಿಗೆ ಕನಿಷ್ಟ 2 ಕಿ. ಮೀ. ಪಾದಯಾತ್ರೆ ನಡೆಸಲಿದ್ದಾರೆ. ನಂತರ ಆಯಾ ಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ನಡೆಸಿ ಸಭೆ ನಡೆಸಲಿದ್ದಾರೆ ಎಂದರು.

ಕಳೆದ 7 ದಶಕದಿಂದ ಕಾಂಗ್ರೆಸ್, ದಲಿತರನ್ನು ಕೇವಲ ತಮ್ಮ ಓಟ್ ಬ್ಯಾಂಕ್ ಆಗಿ ಬಳಸಿಕೊಂಡು ಅವರ ದಾರಿ ತಪ್ಪಿಸಿತು. ಈಗ ದಲಿತರು ಎಚ್ಚೆತ್ತುಕೊಂಡಿದ್ದಾರೆ. ಇನ್ನು ಮುಂದೆ ದಲಿತರೇ ಕಾಂಗ್ರೆಸ್ ನ ದಾರಿ ತಪ್ಪಿಸಿ ಅದರ ಅವಸಾನಕ್ಕೆ ಕಾರಣರಾಗಲಿದ್ದಾರೆ ಎಂದರು.

ಬಿಜೆಪಿ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಎಂದೆಲ್ಲ ಅಪಪ್ರಚಾರ ಮಾಡಿ ಕಾಂಗ್ರೆಸ್, ದಲಿತರ ಮತ ಸೆಳೆಯುತ್ತಿತ್ತು. ಆದರೆ, ಅದೆಲ್ಲಾ ಸುಳ್ಳು ಎಂದು ದಲಿತರಿಗೆ ಅರ್ಥವಾಗಿದೆ. ಆದ್ದರಿಂದಲೇ ದಲಿತರು ಕಾಂಗ್ರೆಸ್ ಬಿಟ್ಟು ಸಾಲು ಸಾಲಾಗಿ ಬಿಜೆಪಿ ಸೇರುತ್ತಿದ್ದಾರೆ.

ಕಾಂಗ್ರೆಸ್ ನಿಂದ ದಲಿತರಿಗೆ ಮಾತ್ರವಲ್ಲ ಮುಸ್ಲಿಮರಿಗೂ ಅನ್ಯಾಯವಾಗಿದೆ. ಅದನ್ನು ಸಿ.ಎಂ. ಇಬ್ರಾಹಿಂ ಬಹಿರಂಗಪಡಿಸುತ್ತಿದ್ದಾರೆ. ಕಾಂಗ್ರೆಸ್ ಈಗ ಒಡೆದ ಮನೆ, ಮೂರು ಬಾಗಿಲು ಎಂಬಂತಾಗಿದೆ. ಸಿದ್ಧರಾಮಯ್ಯ ಮತ್ತು ಡಿಕೆಶಿ ಮಧ್ಯೆ ಬಿರುಕು ದೊಡ್ಡದಾಗಿ ಬೆಳೆಯುತ್ತಿದೆ. ಅದನ್ನು ಮುಚ್ಚಿಹಾಕಲು ಅವರದ್ದೇ ಪಕ್ಷದ ಶಾಸಕರಾದ ಅಖಂಡ ಶ್ರೀನಿವಾಸ, ಸಂಗಮೇಶ ಪ್ರಕರಣ ಬಳಸಿಕೊಳ್ಳುತ್ತಿದೆ. ಸಂಗಮೇಶನ ಸಂಗ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗಕ್ಕೆ ಕಾರಣವಾಗಲಿದೆ ಎಂದು ಛಲವಾದಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಕೋಶಾಧಿಕಾರಿ ನಾಗೇಶ್ ದೇವನಹಳ್ಳಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದಿನೇಶ್ ಅಮ್ಟೂರು, ಪಕ್ಷ ಪ್ರಮುಖರಾದ ರವಿ ಅಮೀನ್, ನಳಿನಿ ಪ್ರದೀಪ್ ಇದ್ದರು.

ಮೀಸಲಾತಿ ಕೇಳುವುದು ತಪ್ಪಲ್ಲ
ಇತರ ಸಮುದಾಯದವರೂ ಮೀಸಲಾತಿ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು. ಇತರ ಸಮುದಾಯದವರಿಗೆ ಶಾಸನಾತ್ಮಕವಾಗಿ ಮೀಸಲಾತಿ ನೀಡುವುದರಿಂದ ದಲಿತರಿಗೆ ಈಗಾಗಲೇ ಸಂವಿಧಾನಾತ್ಮಕವಾಗಿ ನೀಡಲಾಗಿರುವ ಮೀಸಲಾತಿಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

ರಾಜ್ಯದ ಎಲ್ಲಾ ಜಾತಿಗಳಿಗೂ ಮೀಸಲಾತಿ ಸಿಕ್ಕಿದೆ. ಆದರೆ, ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು. ಅದಕ್ಕಾಗಿ ಹೋರಾಟ ನಡೆಯುತ್ತಿದೆ. ತಮಗೆ ಸಿಕ್ಕಿರುವ ಮೀಸಲಾತಿ ಕಡಿಮೆ ಇದೆ ಎಂದು ಅನಿಸಿದವರು ಹೆಚ್ಚು ಮೀಸಲಾತಿ ಕೇಳುತ್ತಿದ್ದಾರೆ. ಅದಕ್ಕಾಗಿ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯ ವರದಿ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!