Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಅನ್ನದಾನ ಯಕ್ಷಗಾನ ಶಿಕ್ಷಣಕ್ಕೆ ಕೃಷ್ಣಮಠ ಪ್ರೇರಣೆ

ಅನ್ನದಾನ ಯಕ್ಷಗಾನ ಶಿಕ್ಷಣಕ್ಕೆ ಕೃಷ್ಣಮಠ ಪ್ರೇರಣೆ

ಉಡುಪಿ: ಅವಿಭಜಿತ ದ.ಕ. ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಇಂದು ಕಾಣುತ್ತಿರುವ ಅನ್ನದಾನ, ಕರಾವಳಿಯ ಆರಾಧನಾ ಕಲೆಯಾಗಿ ರೂಪುಗೊಂಡಿರುವ ಯಕ್ಷಗಾನ ಹಾಗೂ ಸಂಸ್ಕೃತ ಅಧ್ಯಯನಕ್ಕೆ ಪೂರಕವಾಗಿ ಉಡುಪಿ ಶಿಕ್ಷಣ ಕೇಂದ್ರವಾಗಿ ರೂಪುಗೊಳ್ಳಲು ಇಲ್ಲಿನ ಶ್ರೀಕೃಷ್ಣಮಠವೇ ಪ್ರೇರಣೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಬಣ್ಣಿಸಿದರು.

ಉಡುಪಿಗೇ ವಿಶಿಷ್ಟವಾಗಿರುವ ಇಲ್ಲಿನ ಶ್ರೀಕೃಷ್ಣಮಠದಲ್ಲಿ ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರು ಪರಿಷ್ಕರಿಸಿ ಜಾರಿಗೆ ತಂದಿರುವ ದ್ವೈವಾರ್ಷಿಕ ಶ್ರೀಕೃಷ್ಣಪೂಜಾ ಕೈಂಕರ್ಯ ಕ್ರಮಕ್ಕೆ 500 ಸಂವತ್ಸರ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಅದಮಾರು ಶ್ರೀಕೃಷ್ಣಮಠ ಆಶ್ರಯದಲ್ಲಿ ಶನಿವಾರ ಆರಂಭಗೊಂಡ ಪರ್ಯಾಯ ಪಂಚಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆಚಾರ್ಯ ಮಧ್ವರು ಉಡುಪಿ ಕೃಷ್ಣನನ್ನು ಪ್ರತಿಷ್ಠಾಪಿಸುವ ಮೂಲಕ ಅನ್ನದಾನವನ್ನೂ ಆರಂಭಿಸಿ, ಉಡುಪಿ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆದರು. ಮಾಧ್ವ ತತ್ವಾನುಯಾಯಿಗಳಿಂದ ನಡೆಸಲ್ಪಡುವ ಉಡುಪಿ ಮತ್ತು ದ.ಕ. ಜಿಲ್ಲೆಯ ಬಹುತೇಕ ಆಲಯಗಳಲ್ಲಿ ನಿತ್ಯ ಅನ್ನಸಂತರ್ಪಣೆಗೆ ಅನ್ನಬ್ರಹ್ಮ ಕೃಷ್ಣನೇ ಪರೋಕ್ಷ ಕಾರಣ. ಮಾತ್ರವಲ್ಲದೆ, ಗಾನಲೋಲನಾದ ಶ್ರೀಕೃಷ್ಣನ ಉಪಾಸಕರಾದ ನರಹರಿತೀರ್ಥರಿಂದ ಪ್ರದತ್ತವಾದ ಯಕ್ಷಗಾನ ಕಲೆ ಆರಾಧನೆಯ ಕಲೆಯ ಸ್ವರೂಪದಲ್ಲಿ ರೂಪುಗೊಂಡು ಉತ್ತರ ಮತ್ತು ದಕ್ಷಿಣ ಕರಾವಳಿ ಭಾಗದಲ್ಲಿ ಬಡಗು ಮತ್ತು ತೆಂಕುತಿಟ್ಟು ಯಕ್ಷಗಾನದ ರೂಪದಲ್ಲಿ ಪ್ರದರ್ಶಿತಗೊಳ್ಳುತ್ತಿದೆ. ಸಂಸ್ಕೃತಾಭ್ಯಾಸಿಗಳಿಗೆ ಉಡುಪಿ ಶಿಕ್ಷಣ ಕೇಂದ್ರವಾಗಿದ್ದು ಮಾತ್ರವಲ್ಲದೆ, ಆಶ್ರಯ ತಾಣವಾಗಿಯೂ ಸಹಕಾರ ನೀಡಿದೆ ಎಂದು ಆಸ್ರಣ್ಣ ಹೇಳಿದರು.

ಅಭ್ಯಾಗತರಾಗಿದ್ದ ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಮಹಾಬಲೇಶ್ವರ ರಾವ್, ಆಧ್ಯಾತ್ಮಿಕ ಕ್ಷೇತ್ರಕ್ಕೆ ಉಡುಪಿಯ ಕೊಡುಗೆ ಗಮನೀಯ ಎಂದರು. ಪ್ರತೀ ಎರಡು ವರ್ಷಕ್ಕೊಮ್ಮೆ ಅಧಿಕಾರ ಹಸ್ತಾಂತರಕ್ಕೆ ಬದ್ಧರಾಗಬೇಕಾದ ವಾದಿರಾಜ ಯತಿ ಜಾರಿಗೆ ತಂದಿರುವ ಪರ್ಯಾಯ ಕಲ್ಪನೆಯೇ ಅದ್ಭುತ ಎಂದರು.

ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ಚಚನ ನೀಡಿದರು.
ಪಲಿಮಾರು ಮಠದ ಹಿರಿಯ ಯತಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕೋವಿಡ್ ಅವಧಿಯಲ್ಲೂ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಠವನ್ನು ಮುನ್ನಡೆಸಿಕೊಂಡ ಪರಿಯನ್ನು ಪ್ರಶಂಸಿಸಿದರು.

ಪುಸ್ತಕ ಬಿಡುಗಡೆ
ಇದೇ ಸಂದರ್ಭದಲ್ಲಿ ಪಲಿಮಾರು ನಡೆಸಲಾದ ಮಠದ ಕುರಿತ ಉಪನ್ಯಾಸ ಗೋಷ್ಠಿ ಸಂದರ್ಭದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಭಾಗವತ ಚಿಂತನೆಗಳ ಸಂಗ್ರಹ ದಿನಕ್ಕೊಂದು ಭಾಗವತಾಮೃತ ಬಿಂದುಗಳು, ರಾಮ ಸಂದೇಶ ಮತ್ತು ಖಂಡಾರ್ಥ ನಿರ್ಣಯ ಪುಸ್ತಕಗಳನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅನಾವರಣಗೊಳಿಸಿದರು.
ಕೃತಿ ಸಂಗ್ರಹಕಾರ, ಮುಕ್ಕ ಶ್ರೀನಿವಾಸ ವಿ.ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಉಪನ್ಯಾಸಕ ಪ್ರೊ. ಓಂಪ್ರಕಾಶ್ ಭಟ್ ಪ್ರಸ್ತಾವನೆಗೈದರು.

ಈ ಸಂದರ್ಭದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಳ ಅರ್ಚಕ ಹಾಗೂ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣ, ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ, ವಿಹಿಂಪ ಪ್ರಮುಖ ಪ್ರೊ. ನಾರಾಯಣ ಶೆಣೈ, ಯಕ್ಷಗಾನ ಕಲಾರಂಗ ಮಾಜಿ ಅಧ್ಯಕ್ಷ ಕೆ. ಗಣೇಶ ರಾವ್, ಕುಂಜಾರು ಗಿರಿಬಳಗ, ವಿವೇಕಾನಂದ ಸಂಸ್ಥೆ ಮೊದಲಾದವರನ್ನು ಸನ್ಮಾನಿಸಲಾಯಿತು.

ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ ಇದ್ದರು.

ಪರ್ಯಾಯ ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು.

ತುಳು ಸಂಭ್ರಮ
ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ತುಳು ಸಂಸ್ಕೃತಿ ಸಂಭ್ರಮ ನಡೆಯಿತು.

ಅದಕ್ಕೂ ಮುನ್ನ ಪಾರಂಪರಿಕ ವಸ್ತುಗಳ ಕಲಾಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!