Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಪೌರಕಾರ್ಮಿಕರಿಗೆ ಹಲ್ಲೆ: ಈರ್ವರ ದಸ್ತಗಿರಿ

ಪೌರಕಾರ್ಮಿಕರಿಗೆ ಹಲ್ಲೆ: ಈರ್ವರ ದಸ್ತಗಿರಿ

ಉಡುಪಿ: ಸಿಟಿ ಬಸ್ ನಿಲ್ದಾಣ ಬಳಿಯ ಅಂಜುಮಾನ್ ಮಸೀದಿ ಎದುರಿನ ಖಾಸಗಿ ವಾಣಿಜ್ಯ ಮಳಿಗೆಗಳಿಂದ ಶುಕ್ರವಾರ ಕಸ ಸಂಗ್ರಹಿಸಲು ಬಂದ ಪೌರ ಕಾರ್ಮಿಕನ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಸಂಜು ಮಾದರ್, ನಗರ ಠಾಣೆಗೆ ನೀಡಿದ ದೂರಿನ ಮೇರೆಗೆ ಆಸ್ಮಾ ಎಲೆಕ್ಟ್ರಾನಿಕ್ಸ್ ನ ಇಸ್ಮಾಯಿಲ್ ಹಾಗೂ ಸೋಹೆಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಏನು?
ಇಲ್ಲಿನ ಸಿಟಿ ಬಸ್ ನಿಲ್ದಾಣ ಸುತ್ತಮುತ್ತ ಎಂದಿನಂತೆ ಕಸ ಸಂಗ್ರಹಿಸಲು ಬಂದಿದ್ದ ಸಿಬ್ಬಂದಿ ಒಣ ಹಾಗೂ ಹಸಿ ಕಸ ಬೇರ್ಪಡಿಸಿ ಕೊಡುವಂತೆ ಅಂಗಡಿ ಮಾಲೀಕರಿಗೆ ಮಾದರ್ ಹೇಳಿದ್ದು, ಅದರಿಂದ ಸಿಟ್ಟಿಗೆದ್ದ ಇಸ್ಮಾಯಿಲ್ ಹಾಗೂ ಸೋಹೆಲ್ ಕಸ ಬೇರ್ಪಡಿಸಿಕೊಳ್ಳುವಂತೆ ಪೌರ ಕಾರ್ಮಿಕರಿಗೇ ದಬಾಯಿಸಿದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಂಜು ಮಾದರ್ ಮೇಲೆ ಹಲ್ಲೆ ನಡೆಸಲಾಯಿತು.

ಆರೋಪಿಗಳ ವಿರುದ್ಧ ಹಲ್ಲೆ ಹಾಗೂ ಪರಿಶಿಷ್ಟ ಜಾತಿ ಮತ್ತು ದೌರ್ಜನ್ಯ ತಡೆ ಕಾಯ್ದೆ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಉಡುಪಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಮೋದ್ ಖಂಡನೆ
ಪೌರಕಾರ್ಮಿಕನ ಮೇಲಿನ ಹಲ್ಲೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಖಂಡಿಸಿದ್ದಾರೆ. ನಗರದ ಸ್ವಚ್ಛತೆ ಕಾಪಾಡುವ ಹೊಣೆಹೊತ್ತಿರುವ ಪೌರಕಾರ್ಮಿಕರ ಶ್ರಮ ಗೌರವಿಸಿ ಅವರಿಗೆ ಸೂಕ್ತ ಭದ್ರತೆ ನೀಡಬೇಕು.

ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್.ಪಿ ವಿಷ್ಣುವರ್ಧನ್ ಅವರಿಗೆ ತಿಳಿಸಿರುವುದಾಗಿ ಪ್ರಮೋದ್ ಟ್ವೀಟ್ ಮಾಡಿದ್ದಾರೆ.

ಶ್ರೀರಾಮಸೇನೆ ಖಂಡನೆ
ಮೋದಿ ಕನಸಿನ ಸ್ವಚ್ಛ ಭಾರತ ಕಲ್ಪನೆಗೆ ಪೂರಕವಾಗಿ ಉಡುಪಿ ನಗರ ಸ್ವಚ್ಛವಾಗಿಡಲು ಅತೀ ಕಡಿಮೆ ವೇತನದಲ್ಲಿ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಪೌರ ಕಾರ್ಮಿಕನ ಮೇಲೆ ನಡೆದ ಹಲ್ಲೆಯನ್ನು ಶ್ರೀರಾಮ ಸೇನೆ ಖಂಡಿಸುವುದಾಗಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ತಿಳಿಸಿದ್ದಾರೆ.

ಇದು ಹಿಂದೂಗಳ ಮೇಲೆ ನಡೆದ ಹಲ್ಲೆ ಎಂದರೂ ತಪ್ಪಾಗದು. ಹಲ್ಲೆ ಮಾಡಿದ ವ್ಯಕ್ತಿ ಯಾರೇ ಆಗಿದ್ದರೂ ಸರ್ಕಾರ ಹಾಗೂ ಗೃಹ ಇಲಾಖೆ ಕೂಡಲೇ ಬಂಧಿಸಬೇಕು.

ಶ್ರೀರಾಮಸೇನೆ ಪೌರಕಾರ್ಮಿಕರಿಗೆ ಸಂಪೂರ್ಣ ಬೆಂಬಲ ನೀಡುವುದರೊಂದಿಗೆ, ತಪ್ಪಿತಸ್ಥರನ್ನು ತಕ್ಷಣ ಬಂಧಿಸದಿದ್ದಲ್ಲಿ ಸಮಾನಮನಸ್ಕರನ್ನು ಜೊತೆಯಾಗಿಸಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪೌರಕಾರ್ಮಿಕನಿಗೆ ಹಲ್ಲೆ: ವ್ಯಾಪಕ ಖಂಡನೆ
ಉಡುಪಿ: ಕಸ ಬೇರ್ಪಡಿಸಿ ನೀಡುವಂತೆ ಸಲಹೆ ನೀಡಿದ್ದ ಪೌರ ಕಾರ್ಮಿಕನಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಹಲ್ಲೆ ಖಂಡನೀಯ
ಹಲ್ಲೆ ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು ತಿಳಿಸಿದ್ದಾರೆ.

ನಗರವನ್ನು ಸ್ವಚ್ಛಗೊಳಿಸುವ ಸಲುವಾಗಿ ವ್ಯವಸ್ಥಿತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಪ್ರತೀ ಅಂಗಡಿ, ಮನೆಗಳಿಂದ ಹಸಿ ಕಸ, ಒಣ ಕಸ ಎಂದು ವಿಂಗಡಿಸಿ ನೀಡುವಂತೆ ನಗರಸಭೆ ಅನೇಕ ಬಾರಿ ಮನವಿ ಮಾಡಿದೆ. ಅದಕ್ಕಾಗಿ ವ್ಯವಸ್ಥೆ ಮಾಡಿಕೊಟ್ಟಿದೆ. ಆದರೂ ನಿಯಮಗಳನ್ನು ಗಾಳಿಗೆ ತೂರಿ ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ.
ಹಲ್ಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕಾನೂನು ಕ್ರಮಕ್ಕೆ ಒತ್ತಾಯ
ನಗರದ ಸಿಟಿ ಬಸ್ ನಿಲ್ದಾಣದ ಸಮೀಪದ ಆಸ್ಮಾ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಹಸಿ ಕಸ ಹಾಗೂ ಒಣ ಕಸ ವಿಂಗಡಣೆ ವಿಚಾರವಾಗಿ ತಗಾದೆ ತೆಗೆದು ನಗರಸಭೆ ಪೌರಕಾರ್ಮಿಕ ಬಾಗಲಕೋಟೆ ಮೂಲದ, ಪ್ರಸ್ತುತ ನಿಟ್ಟೂರು ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂಜು ಮಾದರ್ ಎಂಬವರಿಗೆ ದೈಹಿಕ ಹಲ್ಲೆ ನಡೆಸಿರುವುದು ಖಂಡನೀಯ. ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ಪೌರಕಾರ್ಮಿಕರು ನಗರ ಸ್ವಚ್ಛತೆಯ ರಾಯಭಾರಿಗಳು. ಅವರ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಆಘಾತಕಾರಿ. ಪೌಕಾರ್ಮಿಕರಿಗೆ ಸೂಕ್ತ ಭದ್ರತೆ ನೀಡುವುದು ಸ್ಥಳಿಯಾಡಳಿತದ ಜವಾಬ್ದಾರಿ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹಮೂರ್ತಿ, ನಗರಸಭೆ ವಿರೋಧ ಪಕ್ಷ ನಾಯಕ ರಮೇಶ ಕಾಂಚನ್, ಬ್ಲಾಕ್ ಎಸ್.ಸಿ. ಘಟಕ ಅಧ್ಯಕ್ಷ ಗಣೇಶ್ ನೆರ್ಗಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ನಗರಸಭೆ ಮಾಜಿ ಸದಸ್ಯರಾದ ನಾರಾಯಣ ಕುಂದರ್, ಗಣೇಶ್ ದೊಡ್ಡಣಗುಡ್ಡೆ ಮೊದಲಾದವರು ಆಗ್ರಹಿಸಿದ್ದಾರೆ.

ಬಂಧನಕ್ಕೆ ಅಭಿನಂದನೆ
ಉಡುಪಿ ನಗರಸಭೆ ಕಸ ವಿಲೇವಾರಿ ಕೆಲಸ ಮಾಡುತ್ತಿದ್ದ ಸಮಯದಲ್ಲೇ ದಲಿತ ಪೌರ ಕಾರ್ಮಿಕ ಸಂಜು ಮೇಲೆ ಹಲ್ಲೆ ನಡೆಸಿದವರನ್ನು ತಕ್ಷಣ ಬಂಧಿಸಿದ ಪೋಲಿಸ್ ಇಲಾಖೆ ಕ್ರಮವನ್ನು ಸಿಐಟಿಯು ಉಡುಪಿ ತಾಲೂಕು ಸಮಿತಿ ಅಭಿನಂದಿಸಿದೆ.
ಅದರಲ್ಲಿ ಪ್ರಮುಖ ಪಾತ್ರ ವಹಿಸಿದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಎಲ್ಲಾ ಮುಖಂಡರು ಹಾಗೂ ನ್ಯಾಯಾಂಗ ಬಂಧನ ವಿಧಿಸುವ ಮೂಲಕ ಆರೋಪಿಗಳಿಗೆ ತಕ್ಕ ಪಾಠ ಕಲಿಸುವಲ್ಲಿ ಸಹಕರಿಸಿದ ಎಲ್ಲಾ ಪ್ರಗತಿಪರ ಸಂಘಟನೆಯ ಸಹಭಾಗೀ ಹೋರಾಟಗಾರರಿಗೆ ಸಿಐಟಿಯು ಅಭಿನಂದಿಸಿದೆ.

ಅಮಾನವೀಯ ಕೃತ್ಯ
ಪೌರ ಕಾರ್ಮಿನ ಹಲ್ಲೆ ಖಂಡನೀಯ. ಇದೊಂದು ಅಮಾನವೀಯ ಕೃತ್ಯ ಎಂದು ವೆಲ್ ಫೇರ್ ಪಾರ್ಟಿ ಜಿಲ್ಲಾ ಉಪಾಧ್ಯಕ್ಷ ವಿಜಯ್ ತಿಳಿಸಿದ್ದಾರೆ.
ಇಂಥ ಘಟನೆಗಳು ಜಿಲ್ಲೆಗೆ ಅಪಖ್ಯಾತಿ ತಂದೊಡ್ಡುತ್ತವೆ. ಅಂಥ ಕೃತ್ಯಗಳು ಮರುಕಳಿಸದಂತೆ ಗಮನವಹಿಸುವಂತೆ ಅವರು ಆಗ್ರಹಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಅವರು, ಪರಿಸರ ಸ್ವಚ್ಛತೆಯಲ್ಲಿ ಸಹಕರಿಸುತ್ತಿರುವ ಪೌರ ಕಾರ್ಮಿಕರ ಬಗ್ಗೆ ಗೌರವ ಭಾವನೆಯಿಂದ ನೋಡಬೇಕು ಎಂದವರು ವಿನಂತಿಸಿದ್ದಾರೆ.

ಭದ್ರತೆಗೆ ಆದ್ಯತೆ ನೀಡಲು ಸಲಹೆ
ಘಟನೆಯನ್ನು ವಿರೋಧಿಸಿರುವ ಯಶೋದ ಆಟೋ ಚಾಲಕರು ಮತ್ತು ಮಾಲಕರ ಸಂಘ, ಪೌರ ಕಾರ್ಮಿಕರಿಗೆ ಸೂಕ್ತ ಭದ್ರತೆ ನೀಡುವಲ್ಲಿ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದೆ.
ಈ ಘಟನೆಯನ್ನು ಪಕ್ಷಾತೀತ ಮತ್ತು ಧರ್ಮಾತೀತವಾಗಿ ನೋಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗಬೇಕು ಎಂದು ಯೂನಿಯನ್ ಆಗ್ರಹಿಸಿದೆ.

ಮೋದಿಗೆ ದೂರು: ಚಿಂತನೆ
ಪೌರ ಕಾರ್ಮಿಕನ ಮೇಲಿನ ಹಲ್ಲೆ ಅಕ್ಷಮ್ಯ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ದೂರು ಸಲ್ಲಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಜಿ. ವಾಸುದೇವ ಭಟ್ ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರ ಸ್ವಚ್ಛ ಭಾರತ್ ಕಲ್ಪನೆ ಸಾಕಾರಗೊಳಿಸಲು ನಿತ್ಯ ಶ್ರಮಿಸುತ್ತಿರುವ ಪೌರಕಾರ್ಮಿಕರ ಮೇಲೆ ನಡೆದ ಹಲ್ಲೆ ಂಡನೀಯ. ಹಲ್ಲೆ ನಡೆಸಿದ ವಿಕೃತ ಮನಸ್ಥಿತಿಯ ವ್ಯಾಪಾರಿಗಳು ಸ್ವಚ್ಛ ಉಡುಪಿಗೆ ಮಾರಕರಾಗಿದ್ದಾರೆ. ಅಂಥವರ ವಿರುದ್ಧ ನಿಷ್ಪಕ್ಷಪಾತ ಕಾನೂನು ಕ್ರಮ ಜರುಗಿಸಬೇಕು ಎಂದವರು ಆಗ್ರಹಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!