Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ದಲಿತರ ಮನೆಯಲ್ಲಿ ದೀಪ ಬೆಳಗಿದ ಪೇಜಾವರಶ್ರೀ

ದಲಿತರ ಮನೆಯಲ್ಲಿ ದೀಪ ಬೆಳಗಿದ ಪೇಜಾವರಶ್ರೀ

ದಲಿತರ ಮನೆಯಲ್ಲಿ ದೀಪ ಬೆಳಗಿದ ಪೇಜಾವರಶ್ರೀ

ಉಡುಪಿ, ನ. 6 (ಸುದ್ದಿಕಿರಣ ವರದಿ): ನಗರದ ಬೀಡಿನಗುಡ್ಡೆಯಲ್ಲಿರುವ ಹರಿಜನ ಕಾಲನಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶ್ರಯದಲ್ಲಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಲೊನಿಯ ಹತ್ತಾರು ಮನೆಗಳಿಗೆ ತೆರಳಿ ಹಣತೆ ದೀಪ ಬೆಳಗಿ ಮನೆಯ ಸದಸ್ಯರೊಂದಿಗೆ ಉಭಯ ಕುಶಲೋಪರಿ ಮಾತುಕತೆ ನಡೆಸಿ ಬೆಳಕಿನ ಹಬ್ಬದ ಶುಭಾಶೀರ್ವಾದ ನೀಡಿದರು.

ಬಳಿಕ ಅಲ್ಲಿನ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ದೇವರ ಸಾಲಂಕೃತ ಭಾವಚಿತ್ರಗಳಿಗೆ ಮಂಗಳಾರತಿ ಬೆಳಗಿ, ಕಾಲೊನಿ ನಿವಾಸಿಗಳು ಸಲ್ಲಿಸಿದ ಭಕ್ತಿ ಗೌರವ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು

ನಮ್ಮ ಪೂರ್ವಜರು ಹಾಕಿಕೊಟ್ಟ ಸನಾತನ ಸಂಪ್ರದಾಯ ಮತ್ತು ಆಚರಣೆಗಳನ್ನು ಮುಂದುವರಿಸಿಕೊಂಡು ಬರಬೇಕು. ಎಷ್ಟೇ ಕಷ್ಟ ಬಂದರೂ ದೇವರ ಸ್ಮರಣೆ ತಪ್ಪಬಾರದು. ನಮ್ಮ ವಿಹಿತ ಕರ್ತವ್ಯಗಳ ಜೊತೆಗೆ ಭಗವಂತನ ಕೃಪೆಗಾಗಿ ಅನುದಿನವೂ ಪ್ರಾರ್ಥಿಸಬೇಕು ಎಂದು ಸಲಹೆ ನೀಡಿದರು.

ರಾ.ಸ್ವ. ಸಂಘ ದೇಶಾದ್ಯಂತ ಅಸ್ಪೃಶ್ಯತಾ ನಿವಾರಣೆ ಅಂಗವಾಗಿ ದಲಿತರ ಬಡಾವಣೆಗಳಲ್ಲಿ ದೀಪಾವಳಿಯಂಥ ಹಬ್ಬಗಳ ಆಚರಣೆಯನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು.

ಕಾಲೊನಿಯ ಮನೆಗಳ ದೇವರ ಕೋಣೆಯ ಗೋಡೆಗಳಲ್ಲಿ ಅಳವಡಿಸಲು ಶ್ರೀರಾಮ- ಶ್ರೀಕೃಷ್ಣ ಮಂತ್ರಗಳ ಫಲಕಗಳನ್ನು ಶ್ರೀಗಳು ವಿತರಿಸಿದರು.

ಕಾಲೊನಿಯ ಪ್ರಮುಖರಾದ ಜಯರಾಮ್, ಸೂರ್ಯ, ಹಿಂದೂ ರುದ್ರಭೂಮಿ ವ್ಯವಸ್ಥಾಪಕಿ ವನಜಾಕ್ಷಿ, ನಗರಸಭೆ ಮಾಜಿ ಸದಸ್ಯೆ ಗೀತಾ ಶೇಟ್, ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯೆ ಸಂಧ್ಯಾ ರಮೇಶ್, ರಾ.ಸ್ವ.ಸಂ. ಉಡುಪಿ ಸಂಘಚಾಲಕ ಡಾ| ನಾರಾಯಣ ಶೆಣೈ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ, ನವೀನ್, ಅಜಿತ್ ಪೈ, ಕೃಷ್ಣ ಭಟ್ ಮೊದಲಾದವರು ಸಹಕರಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!