Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ನಿವೃತ್ತ ಮೀನುಗಾರರಿಗೆ ಪಿಂಚಣಿ: ಡಿಕೆಶಿ ಭರವಸೆ

ನಿವೃತ್ತ ಮೀನುಗಾರರಿಗೆ ಪಿಂಚಣಿ: ಡಿಕೆಶಿ ಭರವಸೆ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
********************************

(ಸುದ್ದಿಕಿರಣ ವರದಿ)

ಮಲ್ಪೆ, ಜು. 6: ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನಿವೃತ್ತ ಮೀನುಗಾರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಮಂಗಳವಾರ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರರ ಸಮಸ್ಯೆ ಆಲಿಸಿದ ಅವರು, ಸದನದಲ್ಲಿ ಮೀನುಗಾರರ ಧ್ವನಿಯಾಗಿ ನ್ಯಾಯಯುತ ಬೇಡಿಕೆ ಈಡೇರಿಸಲು ಯತ್ನಿಸುವುದಾಗಿ ತಿಳಿಸಿದರು.

ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಿಂದ ಮೀನುಗಾರರ ಸಮಸ್ಯೆ ಆಲಿಸಿದರು. ಮುಖ್ಯವಾಗಿ ಸಾಗರ ಮಾಲ ಯೋಜನೆ, ಹೂಳೆತ್ತುವಿಕೆ, ಒಣ ಮೀನು ಜಾಗದ ಗುತ್ತಿಗೆ (ಲೀಝ್) ಸಮಸ್ಯೆ, ಮೀನುಗಾರ ಕಾರ್ಮಿಕರ ಸಮಸ್ಯೆ, ಮತ್ಸ್ಯ ಕ್ಷಾಮ, ಡಿಸೇಲ್ ಸಬ್ಸಿಡಿ ಸೇರಿದಂತೆ ಸರ್ಕಾರದಿಂದ ಅನೇಕ ವರ್ಷದಿಂದ ಬಾಕಿ ಇರುವ ವಿಚಾರಗಳನ್ನು ಮೀನುಗಾರರ ಪ್ರತಿನಿಧಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು.

ಎಲ್ಲರ ಸಮಸ್ಯೆಗಳನ್ನು ಆಲಿಸಿ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ಕಳೆದ ಒಂದು ವರ್ಷದಿಂದ ಮೀನುಗಾರರ ಸಮಸ್ಯೆ ಆಲಿಸಬೇಕೆಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಆದರೆ, ಕೊರೊನಾ ಕಾರಣದಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ ನಿಮ್ಮ ಸಮಸ್ಯೆ ಆಲಿಸಲು ಇಲ್ಲಿಗೆ ಬಂದಿದ್ದೇನೆ.

ಒಬ್ಬ ಮೀನುಗಾರನ ಹಿಂದೆ ಹತ್ತು ಜನರ ಕುಟುಂಬ ಜೀವಿಸುತ್ತದೆ. ಅವರು ಪ್ರಾಣದ ಹಂಗು ತೊರೆದು ಜೀವಿಸುತ್ತಿದ್ದಾರೆ. ಮೀನುಗಾರರು ಸರ್ಕಾರದ ಜೊತೆ ಪಾಲುದಾರರು ಎಂಬ ವಿಚಾರ ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.

ಮೀನುಗಾರಿಕೆ ದೊಡ್ಡ ಚೈನ್ ಲಿಂಕ್ ಆಗಿದ್ದು ಅವರ ಸಮಸ್ಯೆಗಳಿಗೆ ಯಾವ ರೀತಿ ಧ್ವನಿಯಾಗಬಹುದು ಎಂದು ಆಲಿಸಲು ಇಂದು ಬಂದಿರುವುದಾಗಿ ತಿಳಿಸಿದ ಡಿಕೆಶಿ, ರಾಜಕಾರಣಿ ಎನಿಸಿಕೊಂಡ ನಾವು ಎಲ್ಲ ವರ್ಗದ ಜನರ ಸಮಸ್ಯೆ ಆಲಿಸಬೇಕು ಎಂದರು.

ಉಚ್ಚಿಲದಲ್ಲಿ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಮಾಡುತ್ತಿರುವುದು ಶ್ಲಾಘನೀಯ. ಅದು ಕೇವಲ ದೇವಸ್ಥಾನ ಅಲ್ಲ, ಸುಪ್ರೀಮ್ ಕೋರ್ಟ್ ಎಂದು ಬಣ್ಣಿಸಿದರು.

ಸರ್ಕಾರ ಯಾಕೆ ಡೀಸೆಲ್ ಸಬ್ಸಿಡಿ ಕೊಡುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ. ಸಬ್ಸಿಡಿ ಕೊಡಲು ಏನು ಕಷ್ಟ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.

ಕುಲಕಸುಬು ನಡೆಸುವ ಮೀನುಗಾರರ ಕುರಿತು ಆಲೋಚಿಸುವುದು ಅಗತ್ಯ. ಕಸುಬು ಉಳಿಯಬೇಕಿದ್ದಲ್ಲಿ ಮೀನು ಉಳಿಸುವ ಕುರಿತು ಕೂಡಾ ಕಾರ್ಯಕ್ರಮ ರೂಪಿಸಬೇಕು. ಸಾರ್ವಜನಿಕ ವಿತರಣೆಯ ಸೀಮೆ ಎಣ್ಣೆಯನ್ನೂ ನಿಲ್ಲಿಸಲಾಗಿದೆ. ಕಳೆದ ನಾಲ್ಕು ವರ್ಷದಿಂದ ಉಳಿತಾಯ ಪರಿಹಾರ ನಿಧಿಯನ್ನೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇರಳದಲ್ಲಿ ಮೀನುಗಾರರಿಗೆ ನಿವೃತ್ತಿ ಬಳಿಕ ಪಿಂಚಣಿ ನೀಡಲಾಗುತ್ತಿದೆ. ಆ ಬಗ್ಗೆ ಚರ್ಚಿಸಿ, ಇಲ್ಲಿನ ಮೀನುಗಾರರಿಗೂ ಪಿಂಚಣಿ ಸಿಗುವಂತಾಗಬೇಕು. ಅದನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ ಎಂದು ಭವಿಷ್ಯ ನುಡಿದರು. ಮಲ್ಪೆ ಬಂದರಿಗೆ ಅದಷ್ಟು ಶೀಘ್ರ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಸಿ.ಆರ್.ಝಡ್, ಹನ್ನೆರಡು ನಾಟಿಕಲ್ ದೂರಲ್ಲಿ ನೆರೆ ರಾಜ್ಯದ ಕಿರುಕುಳ ಸೇರಿದಂತೆ ಹಲವು ವಿಚಾರಗಳ ಕುರಿತು ಸರ್ಕಾರದ ಗಮನಕ್ಕೆ ತರುವುದಾಗಿ ಡಿಕೆಶಿ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ದ.ಕ. ಯುವ ಕಾಂಗ್ರೆಸ್ ನ ಮಿಥುನ್ ರೈ, ಮೀನುಗಾರ ಮುಖಂಡರಾದ ಮದನ್ ಕುಮಾರ್, ಪ್ರಭಾಕರ್ ಕೋಟ್ಲೆಕರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಹರೀಶ್ ಕಿಣಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!