Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಹೂವಿನಕೆರೆಯಲ್ಲಿ ವೃಕ್ಷಸಂಕುಲ ವೃದ್ಧಿ: ಸೋದೆಶ್ರೀ ಸಂಕಲ್ಪ

ಹೂವಿನಕೆರೆಯಲ್ಲಿ ವೃಕ್ಷಸಂಕುಲ ವೃದ್ಧಿ: ಸೋದೆಶ್ರೀ ಸಂಕಲ್ಪ

ಕುಂದಾಪುರ: ಭಾವಿಸಮೀರ ಶ್ರೀ ವಾದಿರಾಜ ಗುರು ಸಾರ್ವಭೌಮರ ಜನ್ಮಸ್ಥಳ ಹೂವಿನಕೆರೆ ಸೋದೆ ಶ್ರೀ ವಾದಿರಾಜ ಮಠದ 116 ಎಕ್ರೆ ಜಮೀನಿನಲ್ಲಿ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ವೃಕ್ಷ ಸಂಕುಲ ಬೆಳೆಸಲು ಸಂಕಲ್ಪಿಸಿದ್ದಾರೆ.

ಆ ಪ್ರದೇಶದಲ್ಲಿ ಶ್ರೀಗಂಧ ಹಾಗೂ ಸಾಗವಾನಿ ವೃಕ್ಷ ಬೆಳೆಸುವುದರೊಂದಿಗೆ ಅನೇಕ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವ ವಿವಿಧ ಬಗೆಯ ಹಣ್ಣಿನ ಮರಗಿಡಗಳು, ಶುದ್ಧ ಆಮ್ಲಜನಕ ನೀಡುವ ವೃಕ್ಷಗಳು, ಔಷಧೀಯ ಸಸ್ಯಗಳನ್ನು ಬೆಳೆಸಲು ನಿಶ್ಚಯಿಸಿದ್ದು, ಈಚೆಗೆ ವೃಕ್ಷಾರೋಪಣ ಮಾಡುವ ಮೂಲಕ ಬೃಹತ್ ಯೋಜನೆಗೆ ಬೀಜಾಂಕುರ ಮಾಡಿದರು.

ಜೊತೆಗೆ ಅಂತರ್ಜಲ ಮಟ್ಟ ವೃದ್ಧಿಸಲು ಜಮೀನಿನ ಸುತ್ತಲೂ 5 ಅಡಿ ಆಳದ ತೋಡು ಮತ್ತು ಜಮೀನಿನ ಒಳಭಾಗದಲ್ಲಿ ಇಂಗುಗುಂಡಿ ಸಹಿತ ಹಿರಿದಾದ 1 ಮದಗ ನಿರ್ಮಿಸಲು ಉದ್ದೇಶಿಸಿದ್ದಾರೆ.

ಪ್ರಧಾನ ಮಂತ್ರಿ ಮೋದಿ ಕಲ್ಪನೆಯ ಆತ್ಮನಿರ್ಭರ ಭಾರತ ಕರೆಗೆ ಪುಷ್ಟಿಕೊಡುವಂತೆ ಅಕ್ಷಯ ಶೆಟ್ಟಿ ಮತ್ತು ಸುಷ್ಮಾ ರಾವ್ ವಿದೇಶದಲ್ಲಿ ತಾವು ನಿರ್ವಹಿಸುತ್ತಿದ್ದ ವೃತ್ತಿ ತ್ಯಜಿಸಿ ತಮ್ಮ ಹುಟ್ಟೂರಿನಲ್ಲಿ ಸಾಧನೆ ಮಾಡುವ ಹುಮ್ಮಸ್ಸಿನಿಂದ ಹಸಿರುನಾಡು ಸಂಸ್ಥೆ ಆರಂಭಿಸಿ, ಈ ಯೋಜನೆಯ ಮೇಲ್ವಿಚಾರಣೆಯ ಹೊಣೆ ವಹಿಸಿಕೊಂಡಿದ್ದಾರೆ.

ಹೂವಿನಕೆರೆಯ ಪ್ರಸ್ತಾವಿತ ಜಮೀನಿನಲ್ಲಿ ಔಪಚಾರಿಕವಾಗಿ ನಡೆದ ಉದ್ಘಾಟನ ಕಾರ್ಯಕ್ರಮದ ಅಭ್ಯಾಗತರಾಗಿದ್ದ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಈ ಯೋಜನೆ ಹೆಮ್ಮೆಯ ಸಂಗತಿ. ಯೋಜನೆಯಿಂದಾಗಿ ಪರಿಸರದಲ್ಲಿ ಅನೇಕ ಧನಾತ್ಮಕ ವ್ಯತ್ಯಾಸ ಕಂಡುಬರುವಲ್ಲಿ ಸಂಶಯವಿಲ್ಲ. ಈ ವಿಶೇಷ ಕಾರ್ಯಕ್ಕೆ ಪೂರಕ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಇನ್ನೋರ್ವ ಅತಿಥಿ ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಸೋದೆ ಮಠ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.

ಸೋದೆ ಮಠ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!