Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಭರವಸೆಗೆ ತಕ್ಕಂತೆ ನಡೆಯುತ್ತಿಲ್ಲ ಮೋದಿ ಸರ್ಕಾರ

ಭರವಸೆಗೆ ತಕ್ಕಂತೆ ನಡೆಯುತ್ತಿಲ್ಲ ಮೋದಿ ಸರ್ಕಾರ

ಉಡುಪಿ: ಅಧಿಕಾರಕ್ಕೆ ಬರುವ ಮುಂಚೆ ನೀಡಿದ್ದ ಭರವಸೆಗಳನ್ನು ಈಡೇರಿಸ ಕೇಂದ್ರದ ಮೋದಿ ಸರ್ಕಾರ, ಕೊಟ್ಟ ಮಾತಿನಂತೆ ನಡೆಯುತ್ತಿಲ್ಲ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಆರೋಪಿಸಿದರು.

ಬುಧವಾರ ಇಲ್ಲಿನ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋವಿಡ್ ವಾರಿಯರ್ ಗಳನ್ನು ಸನ್ಮಾನಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಇದೀಗ ಮೋಸ ಮಾಡಿದ್ದಾರೆ. ಯುವಜನತೆಗೆ ನರೇಂದ್ರ ಮೋದಿ ಮತ್ತು ಬಿಜೆಪಿಯ ನಿಜವಾದ ಬಣ್ಣ ಇದೀಗ ತಿಳಿಯುತ್ತಿದೆ.

ವಿದೇಶದಿಂದ ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ನೀಡುವುದಾಗಿ ಮೋದಿ ಹೇಳಿದ್ದರು. ಈವರೆಗೆ ಒಬ್ಬರ ಖಾತೆಗೂ 15 ರೂ. ಕೂಡಾ ಜಮೆಯಾಗಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಸುವ ಮೋದಿ ಹೇಳಿಕೆ ಸುಳ್ಳಾಗಿದೆ ಎಂದರು.

ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕ್ರಿಮಿನಲ್ ಚಟುವಟಿಕೆ ಹೆಚ್ಚಾಗಿದ್ದು, ಅದರಿಂದ ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಜಾತಿ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸಿರುವುದೇ ಬಿಜೆಪಿಯ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ದೇಶದ ಉನ್ನತಿಗೆ ಯುವ ಕಾಂಗ್ರೆಸ್ ತನ್ನದೇ ಆದ ಸೇವೆ ನೀಡಿದೆ. ಅಂದು ಒಂದು ಉದ್ದೇಶಕ್ಕೆ ತುರ್ತು ಪರಿಸ್ಥಿತಿ ಘೊಷಣೆಯಾಗಿದ್ದರೆ, ಇಂದು ದೇಶದಲ್ಲಿ ಪ್ರತಿನಿತ್ಯ ತುರ್ತು ಪರಿಸ್ಥಿತಿಯ ವಾತಾವರಣ ಇದೆ. ಮಹಾಮಾರಿ ಕೊರೊನಾದಿಂದ ದೇಶದ ಜನರು ಗೃಹಬಂಧನದಲ್ಲಿರುವಂತೆ ಮೋದಿ ಸರ್ಕಾರ ಮಾಡಿದೆ. ಜಿಲ್ಲೆಯಲ್ಲಿ ಈವರೆಗೆ 3 ಮಂದಿ ಬಿಜೆಪಿ ಕಾರ್ಯಕರ್ತರ ಕೊಲೆಗಳಾಗಿದ್ದು ಅದರಲ್ಲಿ ಬಿಜೆಪಿ ನಾಯಕರೇ ನೇರವಾಗಿ ಭಾಗಿಯಾಗಿದ್ದು, ಅದರ ವಿರುದ್ದ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ.

ಯಡಮೊಗೆಯಲ್ಲಿ ಈಚೆಗೆ ನಡೆದ ಉದಯ ಗಾಣಿಗ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಆತನ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲೆಯಾದ್ಯಂತ 10 ಬ್ಲಾಕ್ ಗಳಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.

ಕೋವಿಡ್ ವಾರಿಯರ್ ಗಳಾದ ಆಸೀಫ್, ನಿತ್ಯಾನಂದ ಒಳಕಾಡು, ಅನ್ಸಾರ್ ಅಹ್ಮದ್, ಈಶ್ವರ್ ಮಲ್ಪೆ, ಡಾ. ಸುನೀತಾ ಶೆಟ್ಟಿ ಅವರನ್ನು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.

ಯುವ ಕಾಂಗ್ರೆಸ್ ಕೇಂದ್ರ ಮತ್ತು ರಾಜ್ಯ ಪದಾಧಿಕಾರಿಗಳಾದ ಅನಿಲ್ ಯಾದವ್, ವಿದ್ಯಾ ಬಾಲಕೃಷ್ಣ, ಸುರಭಿ ದ್ವಿವೇದಿ, ಭವ್ಯ, ಹನುಮ ಕಿಶೋರ್, ಎಚ್. ಎನ್. ಜಗದೀಶ್, ದೀಪಿಕಾ ರೆಡ್ಡಿ, ಮೆರಿಲ್ ರೇಗೊ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಉಪಾಧ್ಯಕ್ಷ ವಿಶ್ವಾಸ್ ಅಮೀನ್, ಬ್ಲಾಕ್ ಮಟ್ಟದ ಪದಾಧಿಕಾರಿಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!