Sunday, July 3, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಶಿಕ್ಷಕರ ಜಯಂತಿ: ಪ್ರಧಾನಿ ಟ್ವೀಟ್ ಸಂದೇಶ

ಶಿಕ್ಷಕರ ಜಯಂತಿ: ಪ್ರಧಾನಿ ಟ್ವೀಟ್ ಸಂದೇಶ

ಶಿಕ್ಷಕರ ಜಯಂತಿ: ಪ್ರಧಾನಿ ಟ್ವೀಟ್ ಸಂದೇಶ

(ಸುದ್ದಿಕಿರಣ ವರದಿ)
ನವದೆಹಲಿ: ಇಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆ ಸಂಭ್ರಮ. ಮಾಜಿ ರಾಷ್ಟಪತಿ, ಭಾರತರತ್ನ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿಯ ಈ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಇಡೀ ಶಿಕ್ಷಕ ಸಮುದಾಯಕ್ಕೆ ಶುಭಕಾಮನೆ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಯುವ ಮನಸ್ಸುಗಳನ್ನು ಬೆಳೆಸುವಲ್ಲಿ ಯಾವಾಗಲೂ ಪ್ರಮುಖ ಪಾತ್ರ ವಹಿಸುವ ಸಂಪೂರ್ಣ ಬೋಧನಾ ಭ್ರಾತೃತ್ವಕ್ಕೆ ಶುಭಾಶಯಗಳು. ಕೋವಿಡ್ 19 ಸಂಕಷ್ಟ ಕಾಲದಲ್ಲಿ ಆನ್ ಲೈನ್ ಮತ್ತು ಇತರ ಮಾರ್ಗಗಳ ಮೂಲಕ ಮಕ್ಕಳಿಗೆ ಶಿಕ್ಷಣ ಧಾರೆಯೆರೆದ ಶಿಕ್ಷಕರ ಪಾತ್ರ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.

ಡಾ| ಎಸ್. ರಾಧಾಕೃಷ್ಣನ್ ಜಯಂತಿಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ವಿಶಿಷ್ಟ ವಿದ್ಯಾರ್ಥಿ ವೇತನ ಹಾಗೂ ನಮ್ಮ ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿಕೊಳ್ಳುತ್ತೇನೆ ಎಂದವರು ಹೇಳಿದ್ದಾರೆ.

ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಬಡ ಕುಟುಂಬದಲ್ಲಿ ಜನಿಸಿ ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನ ಶಕ್ತಿ ಇದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ. ನಮ್ಮ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಮತ್ತು ಭಾರತ ಕಂಡ ಮೊದಲ ಉಪರಾಷ್ಟ್ರಪತಿ ರಾಧಾಕೃಷ್ಣನ್. ಅವರು ಭಾರತ ಕಂಡ ಅಗ್ರಗಣ್ಯ ಶಿಕ್ಷಕ. ಹಾಗಾಗಿಯೇ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ, ಅವರು ಸೇವೆ ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಗೌರವ ಸಲ್ಲಿಸುತ್ತಿದ್ದೇವೆ.

ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ. ಸೆಪ್ಟೆಂಬರ್ 5, 1888ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ರಾಧಾಕೃಷ್ಣನ್ ಎನ್ನುವುದು ಅವರ ತಂದೆ-ತಾಯಿ ಇಟ್ಟ ಹೆಸರು.

ತಂದೆ ಸರ್ವಪಲ್ಲಿ ವೀರಸ್ವಾಮಿ ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬ ಸಾಗಿಸಲು ಕಷ್ಟವಾದ ಸಂದರ್ಭದಲ್ಲಿ ರಾಧಾಕೃಷ್ಣನ್ ಅವರಿಗೆ ಓದಬೇಕೆನ್ನುವ ಅಪಾರ ಹಂಬಲ. ಸ್ಕಾಲರ್ ಶಿಪ್ ಹಣದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜಿನಲ್ಲಿ ತತ್ವಜ್ಞಾನ ವಿಷಯದಲ್ಲಿ ಬಿ.ಎ ಮತ್ತು ಎಂ.ಎ. ಪದವಿಯನ್ನು ಸಂಪಾದಿಸಿಕೊಂಡರು.
ಸ್ನಾತಕೋತ್ತರ ಪದವಿಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ ದಿ ಎಥಿಕ್ಸ್ ಆಫ್ ವೇದಾಂತ್ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ 20 ವರ್ಷದ ಬಾಲಕನ ತಲೆಯಲ್ಲಿದ್ದ ಸಿದ್ಧಾಂತ, ವೇದಾಂತ ವಿಚಾರಗಳು ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು ಎಂದು ಮೋದಿ ಸ್ಮರಿಸಿದ್ದಾರೆ.

1931ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು.
1952ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. ರಾಧಾಕೃಷ್ಣನ್ ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ 1954ರಲ್ಲಿ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು.

ರಾಧಾಕೃಷ್ಣನ್ ಅವರಿಗೆ ಬ್ರಿಟನ್ನಿನ ಆಕ್ಸ್ ಫರ್ಡ್ ವಿ.ವಿ. ಗೌರವ ಡಾಕ್ಟರೇಟ್, ಲಂಡನ್ ಪ್ರವಾಸದಲ್ಲಿದ್ದಾಗ ಆರ್ಡರ್ ಆಫ್ ಮೆರಿನ್ ಪ್ರಶಸ್ತಿ, ವ್ಯಾಟಿಕನ್ ಸಿಟಿ ಪೋಪ್ ಜಾನ್ ಅವರಿಂದ ನೈಟ್ ಆಫ್ ದ ಆರ್ಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಭಾರತೀಯ ವಿದ್ಯಾಭವನದಿಂದ ಬ್ರಹ್ಮವಿದ್ಯಾ ಭಾಸ್ಕರ ಬಿರುದು, ಟೆಂಪಲ್ಟನ್ ಪ್ರಶಸ್ತಿ ಲಭಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!