Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಸುಬ್ರಹ್ಮಣ್ಯದಲ್ಲಿ ಪೂಜಾಕ್ರಮ ಬದಲಿಸದಂತೆ ಆಗ್ರಹ

ಸುಬ್ರಹ್ಮಣ್ಯದಲ್ಲಿ ಪೂಜಾಕ್ರಮ ಬದಲಿಸದಂತೆ ಆಗ್ರಹ

ಉಡುಪಿ: ನಾಡಿನ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನಾದಿ ಕಾಲದಿಂದ ಅನುಸರಿಸಿಕೊಂಡು ಬಂದಿರುವ ಕ್ರಮದಲ್ಲೇ ಪೂಜಾ ಕ್ರಮ ನಡೆಸಿಕೊಂಡು ಹೋಗಬೇಕು. ಪೂಜಾ ಪದ್ಧತಿಯಲ್ಲಿ ಯಾವುದೇ ರೀತಿಯ ಬದಲಾವಣೆ ಕೂಡದು ಎಂದು ಬೆಂಗಳೂರಿನ ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.

ಗುರುವಾರ ಇಲ್ಲಿನ ಪಲಿಮಾರು ಮಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ, ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ ಪೂರ್ವಪ್ರಾಚಾರ್ಯ, ರಾಷ್ಟ್ರಪತಿ ಪದಕ ಪುರಸ್ಕೃತ ವಿದ್ವಾಂಸ ಪ್ರೊ. ಎ. ಹರಿದಾಸ ಭಟ್, ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬಹಳ ಹಿಂದಿನಿಂದಲೂ ತಂತ್ರಸಾರ ಹಾಗೂ ವೈಖಾನಸ ಆಗಮ ಅನುಸಾರ ಪೂಜಾ ಪದ್ಧತಿ ನಡೆಸಲಾಗುತ್ತಿದೆ. ಇದೀಗ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ಸಮಿತಿ, ದೇವಳದ ಆಡಳಿತ ಮಂಡಳಿಗೆ ಮನವಿಯೊಂದನ್ನು ನೀಡಿ, ಶೈವಕ್ಷೇತ್ರವಾಗಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಈ ಬಾರಿಯ ಶಿವರಾತ್ರಿಯಂದು ರುದ್ರ ಪಾರಾಯಣ, ಭಸ್ಮಾರ್ಚನೆ, ಜಾಗರಣೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮನವಿ ಮಾಡಿದೆ. ಈ ಮನವಿ ದೇವಸ್ಥಾನದ ಪ್ರಸ್ತುತ ಪೂಜಾಕ್ರಮಕ್ಕೆ ವಿರುದ್ಧವಾಗಿದ್ದು, ಶಿವರಾತ್ರಿ ಆಚರಣೆಯನ್ನು ಈ ಹಿಂದಿನಂತೆಯೇ ಅನುಸರಿಸಿಕೊಂಡು ಬರಬೇಕು. ಹೊಸತಾಗಿ ಯಾವುದೇ ಕ್ರಮ ಕೈಗೊಳ್ಳಕೂಡದು, ಇದು ಸಂಪ್ರದಾಯಕ್ಕೆ ವಿರೋಧವಾಗುತ್ತದೆ. ಅದಕ್ಕೆ ಅವಕಾಶ ಕೊಡಬಾರದು ಎಂಬುದಾಗಿ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಲಾಖೆ ಆಯುಕ್ತರಿಗೂ ಮನವಿ ಮಾಡುವುದಾಗಿ ತಿಳಿಸಿದರು.

ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ದೇವಳದ ಆವರಣದಲ್ಲಿರುವ ಸಂಪುಟ ಸುಬ್ರಹ್ಮಣ್ಯ ಮಠಕ್ಕೂ ಇರುವ ವಿವಾದವನ್ನು ಸುಬ್ರಹ್ಮಣ್ಯ ದೇವಸ್ಥಾನ ಹಿತ ರಕ್ಷಣಾ ಸಮಿತಿ ದುರುಪಯೋಗಪಡಿಸಿಕೊಂಡು, ದೇವಳದಲ್ಲಿ ಮಾಧ್ವರ ಪ್ರಾಬಲ್ಯವನ್ನು ಕಡಿಮೆಗೊಳಿಸಲು ವಿನೂತನ ಪೂಜಾಕ್ರಮ ಆರಂಭಿಸಬೇಕೆನ್ನುವ ಆಗ್ರಹದ ಮೂಲಕ ಷಡ್ಯಂತ್ರ ರೂಪಿಸುತ್ತಿದೆ. ಅದಕ್ಕೆ ಅವಕಾಶ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಇತರ ದೇವಾಲಯಗಳಲ್ಲೂ ವಿವಿಧ ಬೇಡಿಕೆಗಳು ಬಂದು, ಅನೂಚಾನವಾಗಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳಿಗೇ ಚ್ಯುತಿಯಾಗುವ ಭೀತಿ ಇದೆ. ಆಯಾ ಕ್ಷೇತ್ರಗಳಲ್ಲಿ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ, ಪೂಜಾಕ್ರಮವನ್ನು ಅನುಸರಿಸಿಕೊಂಡು ಹೋಗಬೇಕು ಎಂಬುದು ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿಯ ಆಶಯ ಎಂದು ಪ್ರೊ. ಎ. ಹರಿದಾಸ ಭಟ್ ಸ್ಪಷ್ಟಪಡಿಸಿದರು.

ವಿದ್ವಾಂಸರಾದ ಪ್ರೊ. ಸಗ್ರಿ ರಾಘವೇಂದ್ರ ಉಪಾಧ್ಯಾಯ ಹಾಗೂ ಡಾ| ಎಸ್. ಆನಂದತೀರ್ಥ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!