ಉಡುಪಿ: ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲಿಯೂ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ ಸಂಬಂಧ ಚರ್ಚಿಸಲಾಗುವುದು ಎಂಬ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ. ಟಿ. ರವಿ ಹೇಳಿಕೆಯು ಬಿಜೆಪಿಯ ಚುನಾವಣಾ ಹೇಳಿಕೆ ಆಗದಿರಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿದ್ದಾರೆ.
ದೇಶದ ಜನತೆ ಪ್ರಸ್ತುತ ನಿರುದ್ಯೋಗ, ಮಕ್ಕಳ ವಿದ್ಯಾಭ್ಯಾಸದ ಹೊರೆ, ಬೆಲೆ ಏರಿಕೆ, ಪೌಷ್ಟಿಕ ಆಹಾರ ಕೊರತೆಯಿಂದ ತತ್ತರಿಸಿದ್ದಾರೆ. ಈ ಸಮಸ್ಯೆಗೆ ಪರಿಹಾರ ರೂಪವಾಗಿ ಜನಸಂಖ್ಯಾ ನಿಯಂತ್ರಣದ ದಾರಿ ಕಂಡುಕೊಂಡಿದ್ದಾರೆ. ಹಾಗೆಯೇ ಶಿಕ್ಷಣ ಪಡೆದ ಎಲ್ಲಾ ವರ್ಗದ ಜನರು ಸ್ವಯಂಪ್ರೇರಣೆಯಿಂದ ಜನಸಂಖ್ಯೆ ನಿಯಂತ್ರಿಸಿಕೊಂಡಿದ್ದಾರೆ.
ಆದರೆ, ಉತ್ತರ ಪ್ರದೇಶದಿಂದ ಪ್ರಾರಂಭಗೊಂಡ ಬಿಜೆಪಿಯ ಈ ನಡೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಜನಸಂಖ್ಯಾ ನಿಯಂತ್ರಣ ಬಗ್ಗೆ ಬಿಜೆಪಿಗೆ ನಿಜವಾದ ಕಾಳಜಿ ಇದೆಯೇ ಅಥವಾ ಇದೊಂದು ಚುನಾವಣಾ ಸಂದರ್ಭದ ಹೇಳಿಕೆಗೆ ಸೀಮಿತವಾಗುವುದೋ ಎಂದು ಕಾದು ನೋಡಬೇಕಾಗಿದೆ. ಕಾರಣ, ಉತ್ತರ ಪ್ರದೇಶದ ಬಿಜೆಪಿ ಶಾಸಕರಲ್ಲಿ 152 ಮಂದಿಗೆ ಎರಡಕ್ಕಿಂತ ಹೆಚ್ಚು ಮಕ್ಕಳು ಹಾಗೂ 5ರಿಂದ 8 ಮಕ್ಕಳಿರುವವರು 25 ಮಂದಿ ಇದ್ದಾರೆ ಎಂದು ಭಾಸ್ಕರ ರಾವ್ ಬೊಟ್ಟುಮಾಡಿದ್ದಾರೆ.
ದೇಶವನ್ನು ಕಾಡುತ್ತಿರುವ ಜನಸಂಖ್ಯಾ ಸ್ಪೋಟ ತಡೆಗಟ್ಟಲು ಕಾಂಗ್ರೆಸ್ ಎಂದೂ ವಿರೋಧಿಯಾಗಿಲ್ಲ. ರಾಜೀವ ಗಾಂಧಿ ತನ್ನ ಆಡಳಿತಾವಧಿಯಲ್ಲಿ ದೇಶದ ಸುಭದ್ರತೆ ಹಾಗೂ ಅಭಿವೃದ್ಧಿಗಾಗಿ 5 ಅಂಶಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರಲ್ಲಿ ಜನಸಂಖ್ಯಾ ನಿಯಂತ್ರಣವೂ ಒಂದಾಗಿತ್ತು. ಆದರೆ, ಅಂದು ಬಿಜೆಪಿಯವರು ರಾಜೀವ ಗಾಂಧಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿರಲಿಲ್ಲ ಎಂದು ಭಾಸ್ಕರ ರಾವ್ ಸ್ಮರಿಸಿದ್ದಾರೆ.