Monday, August 15, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಭರದಿಂದ ಸಾಗುತ್ತಿರುವ ರಾಷ್ಟ್ರಪತಿ ಆಯ್ಕೆ ಚುನಾವಣೆ

ಭರದಿಂದ ಸಾಗುತ್ತಿರುವ ರಾಷ್ಟ್ರಪತಿ ಆಯ್ಕೆ ಚುನಾವಣೆ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 18

ಭರದಿಂದ ಸಾಗುತ್ತಿರುವ ರಾಷ್ಟ್ರಪತಿ ಆಯ್ಕೆ ಚುನಾವಣೆ
ನವದೆಹಲಿ: ದೇಶದ 15ನೇ ರಾಷ್ಟ್ರಪತಿ ಆಯ್ಕೆಯ ಚುನಾವಣೆ ಭರದಿಂದ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದರು.

ಸಂಸತ್ ಭವನ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಚುನಾವಣೆ ನಡೆಯಲಿದೆ. ಸುಮಾರು 4,800 ಮಂದಿ ಚುನಾಯಿತ ಜನಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ.

ಮತದಾನ ಪ್ರಕ್ರಿಯೆ ಸಾಂಗವಾಗಿ ನೆರವೇರುತ್ತಿದ್ದು ದೇಶಾದ್ಯಂತ ಸಂಸದರು, ಶಾಸಕರು ಮತ ಚಲಾಯಿಸುತ್ತಿದ್ದಾರೆ.

ಅನುಪಾತದ ಪ್ರಾತಿನಿಧ್ಯ ವ್ಯವಸ್ಥೆಯ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಚುನಾಯಿತ ಸಂಸದರು ಮತ್ತು ರಾಜ್ಯ ಶಾಸಕಾಂಗ ಸಭೆಗಳ ಸದಸ್ಯರು ಮತದಾನ ಮಾಡಲಿದ್ದು, ನಾಮನಿರ್ದೇಶಿತ ಸಂಸದರು ಮತ್ತು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತದಾನದ ಹಕ್ಕು ಹೊಂದಿಲ್ಲ.

ಜುಲೈ 21ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆದು, ಜುಲೈ 25ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ದ್ರೌಪದಿ ಮುರ್ಮು ಎನ್.ಡಿಎ ಅಭ್ಯರ್ಥಿಯಾಗಿ ಹಾಗೂ ಯಶವಂತ ಸಿನ್ಹಾ ವಿಪಕ್ಷಗಳ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಮುರ್ಮು ಗೆಲುವು ಬಹುತೇಕ ನಿಶ್ಚಿತ
ಎನ್.ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು, ಪ್ರತಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗಿಂತ ಹೆಚ್ಚು ಬೆಂಬಲ ಹೊಂದಿದ್ದು, ಮುರ್ಮು ಗೆಲುವು ಬಹುತೇಕ ನಿಚ್ಚಳವಾಗಿದೆ.

ಬಿಜೆಪಿ, ಅದರ ಮಿತ್ರಪಕ್ಷಗಳು ಮತ್ತು ಹಲವಾರು ಎನ್.ಡಿಎಯೇತರ ಪಕ್ಷಗಳ ಬೆಂಬಲದೊಂದಿಗೆ ದ್ರೌಪದಿ ಮುರ್ಮು ಕಣದಲ್ಲಿದ್ದು, ಪ್ರಾದೇಶಿಕ ಪಕ್ಷಗಳಾದ ಬಿಜೆಡಿ, ವೈಎಸ್.ಆರ್.ಸಿಪಿ, ಬಿಎಸ್.ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿ (ಎಸ್), ಶಿರೋಮಣಿ ಅಕಾಲಿದಳ, ಶಿವಸೇನೆ ಮತ್ತು ಜೆಎಂಎಂ ಅವರನ್ನು ಬೆಂಬಲಿಸುವ ಮೂಲಕ ಮುರ್ಮು ಮತಗಳ ಪಾಲು ಸುಮಾರು ಶೇ. 60 ತಲುಪುವ ಸಾಧ್ಯತೆ ಇದೆ. ಅವರು ಆಯ್ಕೆಯಾದಲ್ಲಿ ಬುಡಕಟ್ಟು ಸಮುದಾಯದಿಂದ ಉನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿದ ಮೊದಲ ಮಹಿಳೆಯಾಗಿ ದ್ರೌಪದಿ ಮುರ್ಮು ಹೊರಹೊಮ್ಮಲಿದ್ದಾರೆ.

ಮತ್ತೊಂದೆಡೆ, ಯಶವಂತ್ ಸಿನ್ಹಾ ಅವರಿಗೆ ಕಾಂಗ್ರೆಸ್, ಎನ್.ಸಿಪಿ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಆರ್.ಜೆಡಿ, ಸಿಪಿಐ, ಸಿಪಿಐ (ಎಂ), ಟಿ.ಆರ್.ಎಸ್, ಡಿಎಂಕೆ, ಎಐಎಂಐಎಂ, ನ್ಯಾಷನಲ್ ಕಾನ್ಫರೆನ್ಸ್, ಆರ್.ಎಲ್.ಡಿ ಮತ್ತು ಇತರ ಕೆಲವು ಸಣ್ಣ ಪಕ್ಷಗಳ ಬೆಂಬಲವಿದೆ.

ಆದರೆ, ಗೆಲುವಿನ ಅಗತ್ಯ ಸಂಖ್ಯಾಬಲದಿಂದ ಸಿನ್ಹಾ ತೀರಾ ಹಿಂದುಳಿಯಬಹುದು ಎಂಬ ನಿರೀಕ್ಷೆಯಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!