Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಸುದ್ದಿಯಲ್ಲಿ ಅಭಿಪ್ರಾಯ ಹೇರುವುದು ಎಷ್ಟು ಸರಿ: ಆತ್ಮವಿಮರ್ಶೆಗೆ ಸಿಇಓ ಕರೆ

ಸುದ್ದಿಯಲ್ಲಿ ಅಭಿಪ್ರಾಯ ಹೇರುವುದು ಎಷ್ಟು ಸರಿ: ಆತ್ಮವಿಮರ್ಶೆಗೆ ಸಿಇಓ ಕರೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 1

ಸುದ್ದಿಯಲ್ಲಿ ಅಭಿಪ್ರಾಯ ಹೇರುವುದು ಎಷ್ಟು ಸರಿ: ಆತ್ಮವಿಮರ್ಶೆಗೆ ಸಿಇಓ ಕರೆ
ಉಡುಪಿ: ಸಮಾಜದ ನೋವು ಮತ್ತು ಕೆಡುಕುಗಳನ್ನು ನಿವಾರಿಸುವಲ್ಲಿ ಪತ್ರಕರ್ತರ ಸೇವೆ ಶ್ಲಾಘನೀಯ. ಪತ್ರಿಕೆಗಳಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ನಡೆಯುತ್ತಿದೆ. ಆದರೆ, ಸುದ್ದಿಯಲ್ಲಿ ತಮ್ಮ ಅಭಿಪ್ರಾಯ ಹೇರುವ ಮತ್ತು ಆದೇಶಿಸುವ ಪ್ರಯತ್ನವೂ ನಡೆಯುತ್ತಿರುವುದು ಎಷ್ಟು ಸರಿ ಎಂಬುದನ್ನು ಪತ್ರಕರ್ತರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಸಲಹೆ ನೀಡಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೆನಾನ್ ಸಂಸ್ಥೆ ಸಹಭಾಗಿತ್ವದಲ್ಲಿ ಶುಕ್ರವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರದ ಮಣಿಪಾಲ್ ಇನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ಪತ್ರಿಕೆಯ ನೆರಳುಪ್ರತಿಯನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಲಾಯಿತು.

ಪತ್ರಿಕೆಗೇ ಮಹತ್ವ
ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿ ಮತ್ತು ಸುದ್ದಿ ಲಭ್ಯವಿದ್ದರೂ, ಪತ್ರಿಕೆಗಳ ಮಹತ್ವ ಕಡಿಮೆಯಾಗಿಲ್ಲ. ಉಡುಪಿ ಜಿ.ಪಂ. ವತಿಯಿಂದ ಗ್ರಾ.ಪಂ.ಗಳಲ್ಲಿ ನಡೆಯುತ್ತಿರುವ ಗ್ರಂಥಾಲಯಗಳಲ್ಲಿ ಜನರು ಪುಸ್ತಕಗಳಿಗಿಂತ ಹೆಚ್ಚು ಪತ್ರಿಕೆಗಳನ್ನು ಓದಲು ಆಸಕ್ತಿ ವಹಿಸುತ್ತಿರುವುದು ಪತ್ರಿಕೆಯ ಮಹತ್ವ ತಿಳಿಸುತ್ತದೆ.

ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತ ಹಾಗೂ ಅರ್ಥವತ್ತಾಗಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾಗಿದೆ ಎಂದರು.

ನಾಯಿಪಾಡು!
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಸಮಾಜದ ಕಾವಲು ನಾಯಿ ಎಂದೆಲ್ಲಾ ಕರೆಯಲ್ಪಡುವ ಪತ್ರಕರ್ತರದು ಪ್ರಸ್ತುತ ದಿನಗಳಲ್ಲಿ ನಾಯಿ ಪಾಡು ಆಗಿದೆ. ಕೊರೊನಾ ನೆಪವೊಡ್ಡಿ ರಾತ್ರಿ ಬೆಳಗಾಗುವುದರೊಳಗೆ ಸಂಸ್ಥೆಯಿಂದ ಹೊರದಬ್ಬಲ್ಪಟ್ಟ ಅನೇಕ ಮಂದಿ ಪತ್ರಕರ್ತರ ಪಾಡು, ಬಾಳು ಕೇಳುವವರೇ ಇಲ್ಲ ಎಂಬಂತಾಗಿದೆ ಎಂದು ವಿಷಾದಿಸಿದರು.

ಗ್ರಾಮೀಣ ಪತ್ರಕರ್ತರು ಬೇರೆಯೇ ಆದ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.

ಮಂಗಳೂರು ಮಹಾವೀರ ಏಜನ್ಸಿಯ ಸುಧಾಕರ ಶೆಣೈ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ದೆಹಲಿಯ ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ನ ಸದಸ್ಯ ಅರುಣ್ ಕುಮಾರ್ ಶಿರೂರು, ವಾರ್ತಾಧಿಕಾರಿ ಮಂಜುನಾಥ್ ಅಭ್ಯಾಗತರಾಗಿದ್ದರು.

ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪಬ್ಲಿಕ್ ಟಿವಿ ಕ್ಯಾಮರಾಮೆನ್ ಚೇತನ್ ಮಟಪಾಡಿ ನಿರೂಪಿಸಿದರು.

ಸನ್ಮಾನ
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ ಆಚಾರ್ಯ ಸನ್ಮಾನಿತರನ್ನು ಪರಿಚಯಿಸಿದರು.

ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ ಪಡೆದ ಉದಯವಾಣಿ ಹಿರಿಯ ಪತ್ರಿಕಾ ಛಾಯಗ್ರಾಹಕ ಆಸ್ಟ್ರೋ ಮೋಹನ್ ಮತ್ತು ಉದಯವಾಣಿ ಕಾರ್ಕಳ ವರದಿಗಾರ ಬಾಲಕೃಷ್ಣ ಭೀಮಗುಳಿ ಅವರನ್ನು ಗೌರವಿಸಲಾಯಿತು.

ಪಿಯುಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಪಡೆದ ವಿಜಯವಾಣಿ ಕಟಪಾಡಿ ವರದಿಗಾರ ಹರೀಶ್ ಕಟಪಾಡಿ ಪುತ್ರ ಧನುಷ್ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಗಳಿಸಿದ ನಮ್ಮ ಟಿವಿ ಕಾರ್ಕಳ ವರದಿಗಾರ ಅರುಣ್ ಭಟ್ ಪುತ್ರಿ ಶಿವಾನಿ ಎ. ಕೈಲಾಜೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಛಾಯಾಗ್ರಹಣ ತರಬೇತಿ
ಇದೇ ಸಂದರ್ಭದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಆಧುನಿಕ ಕೆಮರಾಗಳ ಪಾತ್ರ ಕುರಿತು ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಂದ ಮಾಹಿತಿ ಕಾರ್ಯಾಗಾರ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!