Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ: ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ: ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ಗರ್ಭಿಣಿಯರು ಮತ್ತು ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಸರ್ಕಾರ ಮಾತೃಪೂರ್ಣ ಯೋಜನೆಯಡಿ ನೀಡುತ್ತಿರುವ ಮೊಟ್ಟೆ ಖರೀದಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಸೋಮವಾರ ಇಲ್ಲಿನ ಅಜ್ಜರಕಾಡು ಹುತಾತ್ಮರ ಸ್ಮಾರಕ ಬಳಿ ಪ್ರತಿಭಟನೆ ನಡೆಯಿತು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಕೈಯಲ್ಲಿ ಮೊಟ್ಟೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆಯಿಂದಾಗಿ ಅನಿವಾರ್ಯವಾಗಿ ಶಶಿಕಲಾ ಜೊಲ್ಲೆ ತನ್ನ ಸಚಿವ ಸ್ಥಾನದಿಂದ ಕೆಳಗಿಳಿಯಲೇ ಬೇಕಾಗಿದೆ. ಆದರೆ, ಅವರು ಮಾಡಿರುವ ಭ್ರಷ್ಟಾಚಾರವನ್ನು ನಾವು ಮರೆಯುವ ಪ್ರಶ್ನೆಯೇ ಇಲ್ಲ. ಮುಂದಿನ ಮುಖ್ಯಮಂತ್ರಿ ಯಾರೇ ಆಗಲಿ, ಈ ವಿಚಾರದಲ್ಲಿ ತನಿಖೆ ನಡೆಯಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.

ಅಮೃತ್ ಶೆಣೈ ಮಾತನಾಡಿ, ಬಿಜೆಪಿ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು. ಉಡುಪಿ ಶಾಸಕರ ಮರಳು ಹಗರಣ, ಕಾರ್ಕಳ ಶಾಸಕರ ಸಿಮೆಂಟ್ ಹಗರಣದಿಂದ ಹಿಡಿದು ರಾಷ್ಟ್ರ ಮಟ್ಟದ ವರೆಗೂ ಭ್ರಷ್ಟಾಚಾರಿಗಳೇ ಆ ಪಕ್ಷದಲ್ಲಿ ತುಂಬಿದ್ದಾರೆ.

ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಐದು ವರ್ಷದಲ್ಲಿ ಒಂದೇ ಒಂದು ಆರೋಪ ಅವರ ಮೇಲೆ ಬಂದಿರಲಿಲ್ಲ. ಆದರೆ, ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಲೆಲ್ಲ ಒಂದಲ್ಲ ಒಂದು ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದೂ ಅಷ್ಟೇ ಸತ್ಯ.

ಶಶಿಕಲಾ ಜೊಲ್ಲೆ ಮಹಿಳೆಯಾಗಿ ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡುವ ಮೊಟ್ಟೆ ಖರೀದಿಯಲ್ಲಿ ಕೂಡಾ ದುಡ್ಡು ಮಾಡಲು ಹೊರಟಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಬಿಜೆಪಿಯವರು ತಾವು ತೋಡಿದ ಹಳ್ಳದಲ್ಲಿ ತಾವೇ ಬೀಳುವ ಪರಿಸ್ಥಿತಿ ಬಂದಿದೆ. ಗರ್ಭಿಣಿಯರು ಮತ್ತು ಮಕ್ಕಳು ತಿನ್ನುವ ಮೊಟ್ಟೆಯಲ್ಲೂ ಕೋಟಿ ಕೋಟಿ ಲೂಟಿ ಮಾಡಲು ಹೊರಟಿದ್ದ ಶಶಿಕಲಾ ಜೊಲ್ಲೆ ಅವರಿಗೆ ದೇವರು ಅಧಿಕಾರದಲ್ಲಿರಲು ಬಿಡದೇ ಕೆಳಗಿಳಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಾಮ್ಮದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ, ಸಾಮಾಜಿಕ ಜಾಲತಾಣ ಮಾಜಿ ಸಹ ಸಂಚಾಲಕ ಪ್ರಭಾಕರ ಆಚಾರ್ಯ, ಗಣೇಶ್ ನೆರ್ಗಿ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಆಚಾರ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಖಜಾಂಚಿ ಆಗ್ನೆಸ್ ಡೇಸಾ, ಉಪಾಧ್ಯಕ್ಷೆ ಐರಿನ್ ಅಂದ್ರಾದೆ, ಸದಸ್ಯರಾದ ಸುಗುಣ ಪೂಜಾರಿ, ಐರಿನ್ ತಾವ್ರೋ ಮೊದಲಾದವರಿದ್ದರು.

ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಶೆಟ್ಟಿ ವಂದಿಸಿದರು.

ಪಕ್ಷದ ನಾಯಕ ಆಸ್ಕರ್ ಫೆರ್ನಾಂಡಿಸ್ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿರುವುದರಿಂದ ಪ್ರತಿಭಟನೆಯನ್ನು ಸರಳ ಹಾಗೂ ಸಾಂಕೇತಿಕವಾಗಿ ನಡೆಸಲಾಗಿದ್ದು, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!