ಸುದ್ದಿಕಿರಣ ವರದಿ
ಭಾನುವಾರ, ಜುಲೈ 24
ಪರ್ಕಳ ರಸ್ತೆ ದುರಸ್ತಿಗೆ 15 ದಿನಗಳ ಗಡುವು
ಮಣಿಪಾಲ: ಸಂಚಾರಕ್ಕೆ ಅಯೋಗ್ಯವಾಗಿರುವ ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಪರ್ಕಳ ರಸ್ತೆ ದುರಸ್ತಿಪಡಿಸಲು 15 ದಿನಗಳ ಗಡುವು ನೀಡಲಾಗುವುದು ಎಂದು ಹಿರಿಯ ಮನೋವೈದ್ಯ, ಸಾಮಾಜಿಕ ಹೋರಾಟಗಾರ ಡಾ. ಪಿ. ವಿ. ಭಂಡಾರಿ ಗುಡುಗಿದ್ದಾರೆ.
ಶೀಘ್ರ ರಸ್ತೆ ದುರಸ್ತಿಗಾಗಿ ಭಾನುವಾರ ಪರ್ಕಳ ಪೇಟೆಯಲ್ಲಿ ಸಮಾನಮನಸ್ಕರಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವುದೂ ಕಷ್ಟವಾಗುತ್ತಿದೆ. ಪರ್ಯಾಯ ರಸ್ತೆಯನ್ನೂ ಅಗೆದುಹಾಕಲಾಗಿದೆ. ಇದು ಕ್ರಿಮಿನಲ್ ಅಪರಾಧವಾಗಿದ್ದು, ಜನರ ಮೂಲಭೂತ ಸೌಕರ್ಯ ವಂಚಿಸುವ ಕೃತ್ಯವಾಗಿದೆ. 2018ರಲ್ಲಿ ಕಾಮಗಾರಿ ಆರಂಭಿಸುವಾಗ ಮುಂದಿನ 2 ವರ್ಷದೊಳಗೆ ರಸ್ತೆ ದುರಸ್ತಿಪಡಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಆಮೆಗತಿಯಲ್ಲಿ ಸಾಗಿದ ಕಾಮಗಾರಿ 2020ರಲ್ಲಿ ಮರುಚಾಲನೆಗೊಂಡಾಗ ಮುಂದಿನ ಮೇ ತಿಂಗಳಲ್ಲಿ ಪೂರ್ತಿಗೊಳಿಸುವುದಾಗಿ ಭರವಸೆ ನೀಡಲಾಗಿತ್ತು.
ಕೇಂದ್ರ, ರಾಜ್ಯ ಮತ್ತು ಸ್ಥಳೀಯಾಡಳಿತ ಬಿಜೆಪಿ ಕೈಯ್ಯಲ್ಲಿರುವಾಗ ಕಾಮಗಾರಿ ನಡೆಸಲು ಏನು ತೊಂದರೆ ಎಂದು ಡಾ. ಭಂಡಾರಿ ಪ್ರಶ್ನಿಸಿದರು.
ಈ ಬಗ್ಗೆ ಶಾಸಕರು ಮತ್ತು ಸಂಸದರಿಗೆ ದೂರು ನೀಡಿದಲ್ಲಿ ಅವರು ಹೇಳಿಕೆಗಳಿಗೆ ಸೀಮಿತಗೊಳಿಸುತ್ತಿದ್ದಾರೆ. ಶಾಸಕ ರಘುಪತಿ ಭಟ್ ಶಾಸಕನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಕ್ಕೆ ಈ ರಸ್ತೆಯೇ ಉದಾಹರಣೆ ಎಂದು ಡಾ. ಭಂಡಾರಿ ಆರೋಪಿಸಿದರು.
ರಜಾದಿನವಾದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಕೂಡದು ಎಂಬ ಕಾರಣಕ್ಕಾಗಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮುಂದಿನ 15 ದಿನಗಳೊಳಗಾಗಿ ರಸ್ತೆ ದುರಸ್ತಿ ಮಾಡದಿದ್ದಲ್ಲಿ ಪ್ರತಿಭಟನೆಯ ಸ್ವರೂಪವನ್ನೇ ಬದಲಾಯಿಸಿ ಪರ್ಕಳ ರಸ್ತೆಯಲ್ಲಿ ಗುಂಡಿ ಎಣಿಸುವ ಸ್ಪರ್ಧೆ, ಕಂಬಳ ಮಾಡುತ್ತೇವೆ, ಸ್ಪೆಷಲ್ ಪರ್ಕಳ ರಸ್ತೆ ಒಲಿಂಪಿಕ್ಸ್ ಸ್ಪರ್ಧೆ ಆಯೋಜಿಸಿ ಸಂಸದರು ಮತ್ತು ಶಾಸಕರನ್ನೇ ಅತಿಥಿಗಳನ್ನಾಗಿ ಆಮಂತ್ರಿಸುತ್ತೇವೆ ಎಂದರು.
ಜನರ ಮೌನವನ್ನೇ ದೌರ್ಬಲ್ಯ ಎಂದೆನಿಸದೇ ಕೂಡಲೇ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಾ. ಸುಲತಾ ಭಂಡಾರಿ, ರಾಘವೇಂದ್ರ ಪ್ರಭು ಕರ್ವಾಲು, ಅನ್ಸಾರ್ ಅಹ್ಮದ್, ಸ್ಥಳೀಯರು ಭಾಗವಹಿಸಿದ್ದರು.