ಸುದ್ದಿಕಿರಣ ವರದಿ
ಮಂಗಳವಾರ, ಮಾರ್ಚ್ 8
ಕಾಪು ತಾಲೂಕು ಕಸಾಪ ಅಧ್ಯಕ್ಷರಾಗಿ ಪುಂಡಲೀಕ ಮರಾಠೆ ಆಯ್ಕೆ
ಕಾಪು: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾಪು ತಾಲೂಕು ಘಟಕದ 2022- 27ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ, ಹಿರಿಯ ಪತ್ರಕರ್ತ ಬಿ. ಪುಂಡಲೀಕ ಮರಾಠೆ ಅವರನ್ನು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಶಿಫಾರಸಿನ ಮೇರೆಗೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ| ಮಹೇಶ ಜೋಷಿ ನೇಮಕ ಮಾಡಿದ್ದಾರೆ.
ನೂತನವಾಗಿ ಘೋಷಣೆಗೊಂಡ ಕಾಪು ತಾಲೂಕಿನ ಪ್ರಥಮ ಅಧ್ಯಕ್ಷರಾಗಿ ನಿಯುಕ್ತಿಗೊಂಡು, ಎರಡುವರೆ ವರ್ಷಗಳ ಸೀಮಿತ ಸೇವಾವಧಿಯಲ್ಲಿ ಕುತ್ಯಾರು, ಮೂಡುಬೆಳ್ಳೆ ಹಾಗೂ ಪಡುಬಿದ್ರಿ ಸೇರಿದಂತೆ ಹಿರಿಯ ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಕೆ.ಎಲ್. ಕುಂಡಂತಾಯ, ಭರತ್ ಕುಮಾರ್ ಪೊಲಿಪು ಸರ್ವಾಧ್ಯಕ್ಷತೆಯಲ್ಲಿ ಮೂರು ತಾಲೂಕು ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಲ್ಲದೆ, ಹಿರಿಯರೆಡೆಗೆ ಸಾಹಿತ್ಯದ ನಡಿಗೆ, ಶಾಲೆಯತ್ತ ಸಾಹಿತ್ಯ, ದತ್ತಿ ಉಪನ್ಯಾಸ, ಪುಸ್ತಕ ಬಿಡುಗಡೆ, ಕನ್ನಡ ನಾಡು ನುಡಿ, ಸಾಹಿತ್ಯ ಸಂಸ್ಕೃತಿ, ಜನಪದಕ್ಕೆ ಸಂಬಂಧಿಸಿದಂತೆ ನವೆಂಬರ್ ತಿಂಗಳಲ್ಲಿ ತಿಂಗಳ ಸಡಗರ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.
ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸೇವಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಭಾರತೀಯ ಜೇಸೀಸ್, ರೋಟರ್ಯಾಕ್ಟ್, ರೋಟರಿ, ಸ್ಥಳೀಯ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ, ಭಾರತ ಸೇವಾದಳದ ಉಡುಪಿ ಜಿಲ್ಲಾ ಸಮಿತಿ ಸದಸ್ಯ, ಅಂತಾರಾಷ್ಟ್ರೀಯ ರೋಟರಿ ಜಿಲ್ಲಾ ಸಮಿತಿಯಲ್ಲಿ ಸಭಾಪತಿಯಾಗಿದ್ದಾರೆ.