Saturday, July 2, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಕೇಂದ್ರ ಸರ್ಕಾರದಿಂದ ಪುರಾತತ್ವ ಇಲಾಖೆ ನಿರ್ಲಕ್ಷ್ಯ

ಕೇಂದ್ರ ಸರ್ಕಾರದಿಂದ ಪುರಾತತ್ವ ಇಲಾಖೆ ನಿರ್ಲಕ್ಷ್ಯ

ಉಡುಪಿ: ಈ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಹೋಲಿಸಿದಲ್ಲಿ ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಪುರಾತತ್ವ ಇಲಾಖೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿಲ್ಲ ಎಂದು ಪ್ರಾಚ್ಯವಸ್ತು ಸಂಶೋಧನಾ ಸಂಸ್ಥೆ ನಿವೃತ್ತ ಅಧಿಕಾರಿ ಪದ್ಮಶ್ರೀ ಡಾ| ಕೆ. ಕೆ. ಮುಹಮ್ಮದ್ ವಿಷಾದಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ, ಸಂಸ್ಕೃತಿಗೆ ಆದ್ಯತೆ ನೀಡುತ್ತದೆ. ಹಾಗಾಗಿ ಇಲಾಖೆಗೆ ಇನ್ನಷ್ಟು ಆದ್ಯತೆ ಲಭಿಸಬಹುದು ಎಂಬುದು ನಮ್ಮ ಆಶಾಭಾವನೆಯಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ವಾಜಪೇಯಿ ಸರ್ಕಾರಗಳಿಗೆ ಹೋಲಿಸಿದಲ್ಲಿ ಈಗಿನ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ನಿರೀಕ್ಷೆಗೆ ತಕ್ಕಂತೆ ಕೆಲಸ ನಡೆಯುತ್ತಿಲ್ಲ. ಈ ಬಗ್ಗೆ ಅನೇಕ ಸಂದರ್ಭದಲ್ಲಿ ಸಂಬಂಧಪಟ್ಟವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇವೆ. ಪುರಾತತ್ವ ಇಲಾಖೆಯನ್ನು ಸಕ್ರಿಯಗೊಳಸಬೇಕು. ಉತ್ತಮ ತಂಡ ನೇಮಕ ಮಾಡಬೇಕು. ಅದರಿಂದ ಪ್ರಾಚೀನ ಸ್ಮಾರಕ ಸಂರಕ್ಷಿಸಲು ಸಾಧ್ಯ ಎಂದರು.

ಮುಸ್ಲಿಮರೇ ಹಸ್ತಾಂತರಿಸಬೇಕು
ಕಾಶಿ ಮತ್ತು ಮಥುರಾ ವಿವಾದ ಬಗ್ಗೆ ಉತ್ತರಿಸಿದ ಡಾ| ಮುಹಮ್ಮದ್, ಕೇಂದ್ರ ಸರ್ಕಾರ 1991ರಲ್ಲಿ ಧಾರ್ಮಿಕ ಪೂಜಾ ಸ್ಥಳ ಸಂರಕ್ಷಣಾ ಕಾಯ್ದೆ ಮೂಲಕ ಅಯೋಧ್ಯೆ ಹೊರತುಪಡಿಸಿ ಉಳಿದ ಕಡೆಗಳಲ್ಲಿ 1947ರ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿದೆ. ಆದರೆ, ಮುಸ್ಲಿಮರೇ ಸ್ವಇಚ್ಛೆಯಿಂದ ಹಸ್ತಾಂತರ ಮಾಡಬಹುದು. ಅದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ ಎಂದರು.

ವಿವಾದಿತ ಜಾಗವಲ್ಲ
ಈಗಲೂ ಅಯೋಧ್ಯೆ ವಿವಾದಿತ ಜಾಗ ಎಂಬ ರಾಜಕಾರಣಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 1996ರಲ್ಲೇ ಉತ್ಖನನ ನಡೆಸಿದಾಗ ಮಂದಿರದ ಪುರಾವೆಗಳು ಲಭಿಸಿವೆ. ಸುಪ್ರೀಂ ಕೋರ್ಟ್ ಕೂಡಾ ಅದನ್ನು ಮಾನ್ಯ ಮಾಡಿದೆ. ಹಾಗಾಗಿ ರಾಮ ಜನ್ಮಭೂಮಿ ವಿವಾದಿತ ಜಾಗವಲ್ಲ. ಆದರೆ, ಕೆಲವರು ವಿವಾದವನ್ನು ಇನ್ನೂ ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಕಾರಣ ಅವರ ಬಳಿ ಅನ್ಯ ವಿಷಯಗಳಿಲ್ಲ ಎಂದು ಕೆ. ಕೆ. ಮುಹಮ್ಮದ್ ಹೇಳಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!