Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ಬೆಂಗಳೂರಿನಲ್ಲಿ ಪುತ್ತಿಗೆ ವಿದ್ಯಾಪೀಠ ಆರಂಭ

ಬೆಂಗಳೂರಿನಲ್ಲಿ ಪುತ್ತಿಗೆ ವಿದ್ಯಾಪೀಠ ಆರಂಭ

ಬೆಂಗಳೂರು: ಉಡುಪಿ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠ ಆಶ್ರಯದಲ್ಲಿ ರಾಜಧಾನಿಯಲ್ಲಿ ಆರಂಭಿಸಲಾದ ಪುತ್ತಿಗೆ ವಿದ್ಯಾಪೀಠವನ್ನು ಪುತ್ತಿಗೆ ಮಠದ ಹಿರಿಯ ಯತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಇಲ್ಲಿನ ಗೋವರ್ಧನ ಶ್ರೀಕೃಷ್ಣ ಸನ್ನಿಧಾನದಲ್ಲಿ ಉದ್ಘಾಟಿಸಿದರು.

ವೈದಿಕ ಸಂಸ್ಕೃತಿ ರಕ್ಷಣೆಗಾಗಿ ವಿದ್ಯಾಪೀಠ ಆರಂಭಿಸಲಾಗಿದ್ದು, ಲೌಕಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಶಿಕ್ಷಣ ನೀಡಲಾಗುವುದು. ಬೆಳಿಗ್ಗೆ 5.30ರಿಂದ 7.30 ಹಾಗೂ ಸಂಜೆ 6.30ರಿಂದ 8 ಗಂಟೆಯ ಎರಡು ಬ್ಯಾಚ್ ನಲ್ಲಿ ನುರಿತ ಶಿಕ್ಷಕರು ಬೋಧಿಸುವರು. ವಿದ್ಯಾರ್ಥಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಪುತ್ತಿಗೆ ಶ್ರೀಪಾದರು ಹೇಳಿದರು.

ಪ್ರಸ್ತುತ 5 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದು, ಇನ್ನಷ್ಟು ಮಂದಿ ಬರುವವರಿದ್ದಾರೆ. 6 ವರ್ಷ ಅವಧಿಯ ಶಿಕ್ಷಣ ಕ್ರಮ ಇದಾಗಿದ್ದು ತೇರ್ಗಡೆಯಾದವರಿಗೆ ಪ್ರಮಾಣಪತ್ರ ನೀಡಲಾಗುವುದು. ವಯಸ್ಸಿನ ಮಿತಿ ಇಲ್ಲ. ತ್ರಿಮತಸ್ಥ ಬ್ರಾಹ್ಮಣರು ಈ ಅವಕಾಶ ಪಡೆದುಕೊಳ್ಳಬಹುದು. ಶಿಕ್ಷಣ ಪೂರೈಸಿದ ಬಳಿಕ ಬೇರೆ ಬೇರೆ ಉದ್ಯೋಗ ಕೈಗೊಳ್ಳಬಹುದು ಅಥವಾ ಸಂಪೂರ್ಣ ವೈದಿಕ ಉದ್ಯೋಗಕ್ಕೂ ಅವಕಾಶವಿದೆ. ಹೆಚ್ಚಿನ ಶಿಕ್ಷಣ ಅಗತ್ಯವಿದ್ದಲ್ಲಿ ಉಡುಪಿ ಸಮೀಪದ ಪುತ್ತಿಗೆ ಮೂಲಮಠದ ಪುತ್ತಿಗೆ ವಿದ್ಯಾಪೀಠದಲ್ಲಿ ಪಡೆಯಬಹುದು. ವೈದಿಕ ಶಿಕ್ಷಣ ಪೂರೈಸಿದವರಿಗೆ ವಿದೇಶಗಳಲ್ಲೂ ಅವಕಾಶವಿದೆ ಎಂದರು.

ಈ ಸಂದರ್ಭದಲ್ಲಿ ಪುತ್ತಿಗೆ ಮಠ ಆಡಳಿತಾಧಿಕಾರಿ ಪ್ರಸನ್ನಾಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ಭಾರ್ಗವ್ ಮೊದಲಾದವರಿದ್ದರು.

ಬಳಿಕ ಶ್ರೀಪಾದರಿಂದ ಶಾಂತಿಪಾಠ ನಡೆಸಿದರು. ಬಳಿಕ ಶಿಕ್ಷಕರು ಶ್ರೀಸೂಕ್ತ ಪಾಠ ಆರಂಭಿಸಿದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!