Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟ ಅಪೇಕ್ಷಣೀಯ

ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟ ಅಪೇಕ್ಷಣೀಯ

ಸುದ್ದಿಕಿರಣ ವರದಿ
ಬುಧವಾರ, ಜೂನ್ 15

ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟ ಅಪೇಕ್ಷಣೀಯ
ಉಡುಪಿ: ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟ ಅತ್ಯಗತ್ಯ ಮತ್ತು ಅಪೇಕ್ಷಣೀಯ ಎಂದು ನಿಟ್ಟೆ ವಿ.ವಿ. ಕುಲಪತಿ ಡಾ| ಎನ್. ವಿನಯ ಹೆಗ್ಡೆ ಹೇಳಿದರು.

ಇಲ್ಲಿನ ಮಿಷನ್ ಕಂಪೌಂಡ್ ನಲ್ಲಿರುವ ಲೊಂಬಾರ್ಡ್ ಸ್ವಾರಕ (ಮಿಷನ್) ಆಸ್ಪತ್ರೆಯ ಶತಮಾನೋತ್ಸವ ವರ್ಷಾಚರಣೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಜನ ಮೆಚ್ಚಿದ ಆಸ್ಪತ್ರೆ
ಈಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಅಣಬೆಗಳಂತೆ ಹುಟ್ಟಿಕೊಳ್ಳುತ್ತಿದ್ದು, ಅನೇಕ ಸಂಸ್ಥೆಗಳಲ್ಲಿ ಮೂಲಭೂತ ವ್ಯವಸ್ಥೆಗಳೂ ಇರುವುದಿಲ್ಲ. ಅಂಥ ಸಂಸ್ಥೆಗಳಿಂದ ಯಾವ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ ಡಾ| ಹೆಗ್ಡೆ, ಶತಮಾನದ ಹೊಸ್ತಿಲಲ್ಲಿರುವ ಲೊಂಬಾರ್ಡ್ ಆಸ್ಪತ್ರೆ ಆರ್ಥಿಕ ಲಕ್ಷ್ಯಕ್ಕಿಂತ ಸೇವೆಗೆ ಪ್ರಾಮುಖ್ಯತೆ ನೀಡಿರುವ ಕಾರಣದಿಂದಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರು.

ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಸುಶಿಲ್ ಜತನ್ನಾ ನೇತೃತ್ವದಲ್ಲಿ ಆಸ್ಪತ್ರೆ ಉಚ್ಛ್ರಾಯ ಸ್ಥಿತಿ ತಲುಪಿದ್ದು, ಮುಂದಿನ 10 ವರ್ಷದೊಳಗೆ ಸುಸಜ್ಜಿತ ಮೆಡಿಕಲ್ ಕಾಲೇಜು ಆರಂಭಿಸುವ ಮೂಲಕ ಗುಣಮಟ್ಟದ ವೈದ್ಯರು ಈ ಸಂಸ್ಥೆಯಿಂದ ಹೊರಬರುವಂತಾಗಲಿ ಎಂದು ಹಾರೈಸಿದರು.

ಗುಣಮಟ್ಟದ ಆರೋಗ್ಯ ಸೇವೆ
ಅಭ್ಯಾಗತರಾಗಿದ್ದ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ವಂ. ಡಾ| ಐಸಾಕ್ ಲೋಬೋ, ಗ್ರಾಮೀಣ ಬಡಜನತೆಗೆ ಆರೋಗ್ಯ ಸೇವೆ ಕಲ್ಪಿಸುವ ಆಶಯದಿಂದ ಆರಂಭಗೊಂಡ ಈ ಆಸ್ಪತ್ರೆ, ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ.

ಬದಲಾಗುತ್ತಿರುವ ಸಮಾಜ ವ್ಯವಸ್ಥೆಯಲ್ಲಿ ಹೊಸ ಹೊಸ ರೋಗಗಳು ಬಾಧಿಸುತ್ತಿರುವ ಈ ದಿನಗಳಲ್ಲಿ ಉತ್ತಮ ಶುಶ್ರೂಷೆಗಾಗಿ ಆಸ್ಪತ್ರೆಗಳೂ ತಮ್ಮ ಗುಣಮಟ್ಟ ವೃದ್ಧಿಸಿಕೊಳ್ಳುವುದು ಅನಿವಾರ್ಯವಾಗಿದೆ.

ರೋಗ ಚಿಕಿತ್ಸೆಗಿಂತ ರೋಗ ಬಾರದಂತೆ ಜಾಗೃತಿ ಮೂಡಿಸುವ ಕಾರ್ಯ ಆಸ್ಪತ್ರೆಗಳಿಂದಾಗಬೇಕು ಎಂದು ಆಶಿಸಿದರು.

ಶತಮಾನೋತ್ಸವದ ಹೊಸ್ತಿಲಲ್ಲಿ ಉಡುಪಿಯ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಕಿರುಹೊತ್ತಗೆ ಅನಾವರಣಗೊಳಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್, ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಾರ್ಥಕ 100 ವರ್ಷ ಪೂರೈಸಿರುವುದು ಸಣ್ಣ ವಿಷಯವಲ್ಲ. ಜೊತೆಗೆ ಜನಮನ್ನಣೆ ಗಳಿಸಿರುವುದು ಆಸ್ಪತ್ರೆಯ ಗುಣಮಟ್ಟದ ಸೇವೆಗೆ ಸಾಕ್ಷಿ. ಸೇವೆಗೆ ಆದ್ಯತೆ ನೀಡಿ ಮುನ್ನಡೆಯುವ ಸಂಸ್ಥೆಯ ಆಶಯಕ್ಕೆ ಪೂರಕವಾಗಿ ಸಂಸ್ಥೆಯ ಶತಮಾನೋತ್ಸವವನ್ನು ರಕ್ತದಾನ ಶಿಬಿರ ಮೂಲಕ ಆರಂಭಿಸಿರುವುದು ಶ್ಲಾಘನೀಯ ಎಂದರು.

3 ವರ್ಷದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಅಧ್ಯಕ್ಷತೆ ವಹಿಸಿದ್ದ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತನ್ನಾ ಮಾತನಾಡಿ, ಪ್ರಸ್ತುತ 120 ಹಾಸಿಗೆಗಳ ಸಾಮರ್ಥ್ಯವುಳ್ಳ ಮಿಷನ್ ಆಸ್ಪತ್ರೆಯನ್ನು ಮುಂದಿನ 3 ವರ್ಷದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿಸಲಾಗುವುದು. 10 ವರ್ಷದೊಳಗೆ ಸುಸಜ್ಜಿತ ಮೆಡಿಕಲ್ ಕಾಲೇಜು ಸ್ಥಾಪನೆ, ಗ್ರಾಮೀಣ ಭಾಗದಲ್ಲಿ ಉಪಶಾಮಕ ಆರೈಕೆ ಕೇಂದ್ರ, ಹೋಮ್ ಕೇರ್ ಸೇವೆ, ಚಿಕಿತ್ಸಾಲಯ ಸ್ಥಾಪಿಸಿ ಸಮುದಾಯ ಆಧರಿತ ಸೇವೆ ನೀಡಲಾಗುವುದು ಎಂದರು.

ಧರ್ಮಗುರು ರೆ| ಐವನ್ ಸೋನ್ಸ್ ಶುಭಾಶಂಸನೆಗೈದರು. ಕೆಎಸ್.ಡಿ ಕಾರ್ಯದರ್ಶಿ ವಿಲಿಯಂ ಕಾರೆ, ಕೋಶಾಧಿಕಾರಿ ವಿನ್ಸೆಂಟ್ ಪಾಲನ್ನ, ಕ್ರೈಸ್ತ ಶಿಕ್ಷಣ ಮತ್ತು ವೈದ್ಯಕೀಯ ಫೆಲೊಶಿಪ್ ಟ್ರಸ್ಟ್ ಅಧ್ಯಕ್ಷ ಸ್ಟ್ಯಾನ್ಲಿ ಕರ್ಕಡ, ನಗರಸಭಾ ಸದಸ್ಯ ರಮೇಶ ಕಾಂಚನ್, ಮುಸ್ಲಿಂ ಒಕ್ಕೂಟದ ಮೊಹಮ್ಮದ್ ಮೌಲಾ, ಪ್ರಸೂತಿಕಾ ತಜ್ಞೆ ಡಾ. ದೀಪಾ ರಾವ್, ಪ್ರೇಮಾ ಕರ್ಕಡ, ಶಬಿ ಖಾಝಿ ಮೊದಲಾದವರಿದ್ದರು.

ಲೊಂಬಾರ್ಡ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಸುಜಾ ಕರ್ಕಡ ಸ್ವಾಗತಿಸಿದರು. ಆಡಳಿತಾಧಿಕಾರಿ ಡೀನಾ ಪ್ರಭಾವತಿ ವಂದಿಸಿದರು.

ಅದಕ್ಕೂ ಮುನ್ನ ಕರ್ನಾಟಕ ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷೆ ಭಗಿನಿ ಸುಜಾತಾ ನೇತೃತ್ವದಲ್ಲಿ ಕೃತಜ್ಞತಾ (ಪ್ರಾರ್ಥನೆ- ಪೂಜೆ) ಸಭೆ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!