Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ರಾಜಕೀಯ ಗೊಂದಲ ಸಿಎಂ ಬಗೆಹರಿಸುವ ವಿಶ್ವಾಸ

ರಾಜಕೀಯ ಗೊಂದಲ ಸಿಎಂ ಬಗೆಹರಿಸುವ ವಿಶ್ವಾಸ

ಉಡುಪಿ: ಸಚಿವರಾದ ಆನಂದ ಸಿಂಗ್ ಮತ್ತು ಮಾಧುಸ್ವಾಮಿ ರಾಜೀನಾಮೆ ಹಿನ್ನೆಲೆಯಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಶೀಘ್ರ ಪರಿಹಾರಗೊಳ್ಳಿದ್ದು, ಅದನ್ನು ಮುಖ್ಯಮಂತ್ರಿ ಬಗೆಹರಿಸುವ ವಿಶ್ವಾಸವಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಕಾಪು ಮಿನಿ ವಿಧಾನಸೌಧ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿಯವರಿಂದ ಶೀಘ್ರ ಬೆಂಗಳೂರಿಗೆ ಆಗಮಿಸುವಂತೆ ದೂರವಾಣಿ ಕರೆ ಬಂದಿದೆ ಎಂದೂ ಅವರು ಹೇಳಿದರು.

ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲರೊಂದಿಗೆ ಒಂದು ಸುತ್ತು ಮಾತನಾಡಿದ್ದೇನೆ. ಆನಂದ್ ಸಿಂಗ್ ಸಂಪರ್ಕ ಸಾಧ್ಯವಾಗಿಲ್ಲ. ಶಾಸಕ ರಾಜುಗೌಡ ಮತ್ತು ಎಂಟಿಬಿ ನಾಗರಾಜ್ ಜೊತೆ ಮಾತುಕತೆ ನಡೆದಿದೆ. ದುಡುಕಿ ಯಾವುದೇ ತಪ್ಪು ನಿರ್ಥಾರ ಕೈಗೊಳ್ಳಬೇಡಿ ಎಂದೂ ಹೇಳಿದ್ದೇನೆ. ಎಲ್ಲರೊಂದಿಗೆ ಮಾತನಾಡುವುದಾಗಿಯೂ ಸಚಿವ ಅಶೋಕ್ ತಿಳಿಸಿದರು.

ಖಾತೆ ಹಂಚಿಕೆ ಬಳಿಕ ಗೊಂದಲ ಉಂಟಾಗಿದೆ. ರಾಜಕೀಯದಲ್ಲಿ ಇದೆಲ್ಲಾ ಸಹಜ. ಎಲ್ಲವನ್ನೂ ಎದುರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥರಿದ್ದಾರೆ. ನಾವೆಲ್ಲ ಅವರ ಜೊತೆಗಿದ್ದೇವೆ ಎಂದರು.

ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ಮೈತ್ರಿ ಸರಕಾರವಿದೆ ಎಂಬ ಡಿಕೆಶಿ ವ್ಯಂಗ್ಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಡಿ. ಕೆ. ಶಿವಕುಮಾರ್ ಇನ್ನೂ ಹಳೆಯ ಮೈತ್ರಿಯ ಗುಂಗಿನಲ್ಲಿಯೇ ಇದ್ದಾರೆ. ಅವರಿಗೆ ಕುಮಾರಸ್ವಾಮಿಗೆ ಬೆನ್ನಿಗೆ ಚೂರಿಹಾಕಿದ ಅನುಭವ ಇನ್ನೂ ಹಾಗೇ ಇದೆ. ಕಾಂಗ್ರೆಸ್ಸಿನಿಂದ ಬೇಸತ್ತವರು ನಮ್ಮ ಜೊತೆ ಬಂದಿದ್ದಾರೆ. ನಮ್ಮ ಜೊತೆ ಬಂದವರಿಗೆ ಕಾಂಗ್ರೆಸ್ಸಿನಲ್ಲಿ ಯಾವುದೇ ಪದವಿ ಇರಲಿಲ್ಲ. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದ ಎಲ್ಲರಿಗೂ ಉತ್ತಮ ಖಾತೆಗಳನ್ನೇ ನೀಡಿದ್ದೇವೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅತಿ ಹೆಚ್ಚು ಲಾಭ ಪಡೆದುಕೊಂಡವರು ಡಿ. ಕೆ. ಶಿವಕುಮಾರ್. ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬರುವುದನ್ನು ಕನಸಲ್ಲಿಯೂ ಎಣಿಸಲಾಗದು ಎಂದು ಭವಿಷ್ಯ ನುಡಿದರು.

ಬೆಂಗಳೂರಿನಲ್ಲಿ ನಡೆಸಲುದ್ದೇಶಿಸಿದ ರೈತ ಚಳುವಳಿ ಬಗ್ಗೆ ಮಾತನಾಡಿದ ಸಚಿವ ಅಶೋಕ್, ಚಳುವಳಿ ಮಾಡುವ ಹೇಳಿಕೆ ಮಾತ್ರ ಬರುತ್ತಿದೆ. ಪ್ರತಿಭಟನೆಗೆ ಯಾರೂ ಬೆಂಬಲ ವ್ಯಕ್ತಪಡಿಸಿಲ್ಲ. ಪಂಜಾಬ್, ಹರ್ಯಾಣ ಹೊರತುಪಡಿಸಿ ದೇಶದಲ್ಲಿ ಯಾರೂ ಬೆಂಬಲ ಕೊಟ್ಟಿಲ್ಲ. ನಾಳೆ ಬೆಂಗಳೂರಿನಲ್ಲಿ ಯಾವುದೇ ರೀತಿಯ ಪ್ರತಿಭಟನೆ ನಡೆಯುವುದಿಲ್ಲ ಎಂದರು.

ಹೊಸದಾಗಿ ಕೆಲವೊಂದು ಶಾಸಕರು ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಬಿಜೆಪಿಗೆ ಸೇರುವವರ ದೊಡ್ಡ ಪಟ್ಟಿಯೇ ಇದೆ. ಯಾವ ಕಾಲಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಬಿಜೆಪಿ ಸೇರುವವರ ದೊಡ್ಡ ಪಟ್ಟಿ ಇರುವುದಂತೂ ನಿಜ ಎಂದರು.

ಶಾಸಕ ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!