Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ರಾಮ ಸಂದೇಶ ಕೃತಿ ಲೋಕಾರ್ಪಣೆ

ರಾಮ ಸಂದೇಶ ಕೃತಿ ಲೋಕಾರ್ಪಣೆ

ಉಡುಪಿ: ಪಲಿಮಾರು ಮಠದ ಯತಿ ಪರಂಪರೆಯ ಶ್ರೀ ರಾಜರಾಜೇಶ್ವರತೀರ್ಥ ಯತಿ ಸಂಸ್ಕೃತದಲ್ಲಿ ರಚಿಸಿದ್ದ ರಾಮ ಸಂದೇಶ ಕಾವ್ಯಕ್ಕೆ ಕನ್ನಡ ಕಾವ್ಯರೂಪದಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಬರೆದಿದ್ದ ಭಾವಾರ್ಥ ಕೃತಿಯನ್ನು ಶುಕ್ರವಾರ ಬನ್ನಂಜೆಯವರ ನಿವಾಸ ಅಂಬಲಪಾಡಿಯ ಈಶಾವಾಸ್ಯಮ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನಾವರಣಗೊಳಿಸಿದರು.

ಈಶಾವಾಸ್ಯ ಪ್ರತಿಷ್ಠಾನ ಉಡುಪಿ ಮತ್ತು ದ್ವೈಪಾಯನ ಪ್ರತಿಷ್ಠಾನ ಬೆಂಗಳೂರು ಸಂಯುಕ್ತವಾಗಿ ಕೃತಿ ಪ್ರಕಟಿಸಿತ್ತು.

ಸಂದೇಶ ನೀಡಿದ ಪಲಿಮಾರು ಶ್ರೀಗಳು, ಗೋವಿಂದಾಚಾರ್ಯರು ಈ ಕೃತಿಯನ್ನು ಎಂದೋ ಪ್ರಕಟಿಸಬೇಕಿತ್ತು. ಅನೇಕ ಬಾರಿ ಅದು ಮುಂದೆ ಹೋಗುತ್ತಲೇ ಇತ್ತು. ಆದರೆ, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಹೊತ್ತಿನಲ್ಲೇ, ಅದೂ ಮಧ್ವನವಮಿ ಪರ್ವದಿನದಂದೇ ಅವರ ಮನೆಯಲ್ಲೇ ಬಿಡುಗಡೆಗೊಳ್ಳುತ್ತಿರುವುದು ಯೋಗಾಯೋಗ ಎಂದರು.

ಅತ್ಯಂತ ಅಪೂರ್ವವಾದ ಇದರ ಮೂಲಕೃತಿ (ರಾಜರಾಜೇಶ್ವರ ಯತಿ ವಿರಚಿತ)ಗೆ ಪೇಜಾವರ ಮಠದ ಯತಿ ಪರಂಪರೆಯ ಶ್ರೀ ವಿಶ್ವಪತಿತೀರ್ಥರು ವ್ಯಾಖ್ಯಾನ ಬರೆದು, ಪ್ರಶಂಸಿಸುವ ಮೂಲಕ ಆ ಕಾಲದಲ್ಲಿ ಮಠ ಮತ್ತು ಯತಿಗಳ ನಡುವಿನ ಆತ್ಮೀಯತೆಯ ನಂಟಿನ ಗಾಢತೆ ಎಷ್ಟಿತ್ತು ಎನ್ನುವುದನ್ನು ತಿಳಿಸುತ್ತದೆ.

ಬನ್ನಂಜೆಯವರು ತಮ್ಮ ನಿತ್ಯನೂತನವಾದ ಕನ್ನಡ ಕಾವ್ಯದ ಮೂಲಕ ಈ ಕೃತಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈ ಕೃತಿಯ ಮೂಲಕ ರಾಮ ಸಂದೇಶ ಮನೆ ಮನೆಗೆ ತಲುಪಲಿ. ಬನ್ನಂಜೆಯವರ ಸಮಗ್ರ ವಾಙ್ಮಯ ಕೊಡುಗೆಗಳ ನಿರಂತರ ಪ್ರಕಟಣೆ ಕಾರ್ಯ ನಡೆಯುವಂತಾಗಲಿ ಎಂದು ಹಾರೈಸಿದರು.

ವಿದ್ವಾನ್ ಡಾ| ರಾಮನಾಥ ಆಚಾರ್ಯ ಕೃತಿ ಪರಿಚಯ ಮಾಡಿದರು. ದ್ವೈಪಾಯನ ಪ್ರತಿಷ್ಠಾನದ ನರಸಿಂಹಾಚಾರ್ಯ, ಕಡ್ಡಿ ಬದರೀನಾಥ ಆಚಾರ್ಯ, ಬನ್ನಂಜೆ ಮೊಮ್ಮಗ ಯಾಸ್ಕ ಆಚಾರ್ಯ, ರಮಾ ಆಚಾರ್ಯ, ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ ಇದ್ದರು

ಬನ್ನಂಜೆ ಪುತ್ರ ವಿನಯಭೂಷಣ ಆಚಾರ್ಯ ಪ್ರಸ್ತಾವನೆಗೈದರು. ಜಿ. ವಾಸುದೇವ ಭಟ್ ಪೆರಂಪಳ್ಳಿ ನಿರೂಪಿಸಿ, ವಂದಿಸಿದರು. ಸಮಾರಂಭಕ್ಕೂ ಮುನ್ನ ಶ್ರೀಗಳನ್ನು ಗೌರವದಿಂದ ಬರಮಾಡಿಕೊಂಡು ಗುರುಪೂಜೆ ಸಲ್ಲಿಸಲಾಯಿತು.

ತೌಳವ ಮಂಡಲ ವರ್ಣನೆ!
ರಾಜರಾಜೇಶ್ವರತೀರ್ಥರು ಈ ಕೃತಿಯಲ್ಲಿ ಶ್ರೀರಾಮನ ಬಾಯಿಯಿಂದಲೇ ತೌಳವ ದೇಶದ ಅಪೂರ್ವ ಸೊಬಗನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಸೀತಾನ್ವೇಷಣೆಗೆ ತೆರಳುವ ಹನುಮಂತನ ಬಳಿ, ದಾರಿ ಮಧ್ಯದಲ್ಲಿ ಸಿಗುವ ಅತ್ಯಂತ ಸುಂದರವಾದ ತೌಳವ ದೇಶವನ್ನು ಕಾಣದೇ ಹೋಗಬೇಡ ಎಂದು ತಿಳಿಸುವ ಸನ್ನಿವೇಶ ತುಂಬ ಸೊಗಸಾಗಿದೆ ಎಂದು ಪಲಿಮಾರು ಶ್ರೀಗಳು ತಿಳಿಸಿದರು.

ಸಂಸತ್ ಶಿಲಾನ್ಯಾಸ ಸಂದರ್ಭ ಮಂಗಲಾಷ್ಟಕ ಪಠಣ
ಈಚೆಗೆ ನಡೆದ ನೂತನ ಸಂಸತ್ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಶೃಂಗೇರಿ ಮಠದಿಂದ ತೆರಳಿದ ಋತ್ವಿಜರು ರಾಜರಾಜೇಶ್ವರ ಯತಿ ರಚಿಸಿದ ಮಂಗಲಾಷ್ಟಕದ `ಆದಿತ್ಯಾದಿ ನವಗ್ರಹ….’ಎನ್ನುವ ಶ್ಲೋಕ ಉದ್ಧರಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ರೀಗಳು ಬಣ್ಣಿಸಿದರು.

ಹನುಮ ಛಂದಸ್ಸು
ಕೃತಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯ ವಿಭಿನ್ನ ಛಂದಸ್ಸನ್ನು ಬಳಸಿದ್ದು, ಕೆಲವೆಡೆ ಹನುಮಂತನ ಬಾಲದಂತೆ ದೀರ್ಘವಾಗಿಯೂ ಕೆಲವೆಡೆ ಹೃಸ್ವವಾಗಿಯೂ ಇದೆ. ಇದು ರಾಮನ ಕೃತಿ ಆದ್ದರಿಂದ ಇದು ಹನುಮ ಛಂದಸ್ಸು ಎಂದು ಸ್ವತಃ ಬನ್ನಂಜೆ ಬಣ್ಣಿಸಿದ್ದಾರೆ ಎಂದು ರಾಮನಾಥ ಆಚಾರ್ಯ ತಿಳಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!