Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ರೆಡ್ ಕ್ರಾಸ್ ಸೇವೆ ಶ್ಲಾಘನೀಯ

ರೆಡ್ ಕ್ರಾಸ್ ಸೇವೆ ಶ್ಲಾಘನೀಯ

ಸುದ್ದಿಕಿರಣ ವರದಿ
ಸೋಮವಾರ, ಏಪ್ರಿಲ್ 18

ರೆಡ್ ಕ್ರಾಸ್ ಸೇವೆ ಶ್ಲಾಘನೀಯ
ಉಡುಪಿ: ಕೋವಿಡ್ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆ ನಡೆಸಿದ ಪ್ರತಿಯೊಂದು ಕಾರ್ಯವೂ ಶ್ಲಾಘನೀಯವಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿಯೂ ಶ್ರಮ ವಹಿಸಿ ಸಾಮಾಜಿಕ ಕೆಲಸಗಳನ್ನು ಮಾಡಿದ ಹೆಗ್ಗಳಿಕೆ ರೆಡ್ ಕ್ರಾಸ್ ಸಂಸ್ಥೆಯದ್ದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ತಿಳಿಸಿದರು.

ಅಜ್ಜರಕಾಡು ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪರಿಪೋಷಣಂ ಯೋಜನೆಯಡಿ ಅಂತರ್ಗತ ಪ್ರೌಢಶಾಲೆಗಳ ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ಗಳಿಗೆ ಆಯೋಜಿಸಲಾದ ಎರಡು ದಿನದ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ರೆಡ್ ಕ್ರಾಸ್ ಸಂಸ್ಥೆ ತನ್ನದೇ ಆದ ಸೇವಾ ಮನೋಭಾವ ಹೊಂದಿದ್ದು, ಎಲ್ಲರಲ್ಲಿಯೂ ಉತ್ಸಾಹ ತುಂಬುವ ಕೆಲಸ ಮಾಡುತ್ತಾ ಬಂದಿದೆ. ಕೊರೊನಾ ಕಾಲದ ಪ್ರತೀ ಹಂತದಲ್ಲಿಯೂ ರೆಡ್ ಕ್ರಾಸ್ ಕೊಡುಗೆ ಅಪಾರ. ಉಚಿತವಾಗಿ ಮಾಸ್ಕ್ ಸಾರ್ವಜನಿಕರಿಗೆ ತಲುಪಿಸುವುದೂ ಸೇರಿದಂತೆ ಆಹಾರ ವ್ಯವಸ್ಥೆಯ ಕಾರ್ಯವನ್ನೂ ಹಮ್ಮಿಕೊಳ್ಳಲಾಗಿತ್ತು. ಅಷ್ಟೇ ಅಲ್ಲದೇ ಕೊರೊನಾದಿಂದ ನೊಂದ ಬಡ ಕುಟುಂಬಗಳನ್ನು ಗುರುತಿಸಿ, ಅವರಿಗೆ ದಿನಸಿ ಕಿಟ್ ಕೂಡಾ ವಿತರಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಸೇವೆ ಹಾಗೂ ಧ್ಯೇಯ ಮನೋಭಾವವನ್ನು ನಾವು ಕಿರಿ ವಯಸ್ಸಿನಲ್ಲಿಯೇ ಅಳವಡಿಸಿಕೊಂಡು ಬಂದಲ್ಲಿ ಮುಂದೆ ಅದನ್ನು ಕಾರ್ಯರೂಪಕ್ಕೆ ತರಬಹುದು. ರೆಡ್ ಕ್ರಾಸ್ ಸಂಸ್ಥೆ ಎಂದರೆ ಅದು ನಿಸ್ವಾರ್ಥ ಸೇವಾ ಮನೋಭಾವ ಎಂದರು.
ಈ ಸಂಸ್ಥೆಯ ಬಗ್ಗೆ ಇನ್ನೂ ಅತೀ ಹೆಚ್ಚಿನ ಜಾಗೃತಿ ಜನರಲ್ಲಿ ಮೂಡಿಸಬೇಕು ಹಾಗೂ ಇನ್ನಷ್ಟು ಸೇವೆಗಳು ಸಂಸ್ಥೆಯಿಂದ ನಡೆಯಲಿ ಎಂದವರು ಆಶಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಅಶೋಕ್ ಕಾಮತ್, ಶಿಕ್ಷಕ ಮತ್ತು ಸಾಮಾಜಿಕ ಪರಿವರ್ತನೆ ಬಗೆಗಿನ ದಿಕ್ಸೂಚಿ ಭಾಷಣದಲ್ಲಿ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವದ ಮೌಲ್ಯಯುತ ಕಲಿಕೆ ಅತ್ಯಂತ ಅಗತ್ಯವಾಗಿದ್ದು, ರೆಡ್ ಕ್ರಾಸ್ ಸಂಸ್ಥೆಯಿಂದ ನಡೆಸುವ ಪ್ರತಿಯೊಂದು ಚಟುವಟಿಕೆ ಮಕ್ಕಳಲ್ಲಿ ಪ್ರೌಢಾವಸ್ಥೆಯಲ್ಲಿಯೇ ಗುರಿ, ಧ್ಯೇಯ ಮತ್ತು ಸೇವೆಗಳ ಬಗ್ಗೆ ತಿಳಿಸುತ್ತದೆ ಎಂದರು.

ಅಪಘಾತ ಸಂಭವಿಸಿದಾಗ ಎದುರಿಸುವ ಜಾಣ್ಮೆ ಹಾಗೂ ಘಟನೆ ನಡೆಯುವುದನ್ನು ತಪ್ಪಿಸುವ ಬಗ್ಗೆ ಮೊದಲೇ ತಿಳಿದಿರಬೇಕು ಹಾಗೂ ಎಲ್ಲಾ ಸಂದರ್ಭಗಳ ಸೇವೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡಬೇಕು ಎಂದರು.
ಶಾಲೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಿ, ಅವರನ್ನು ಸಂಘಟಿಸಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನಾಯಕತ್ವದ ಗುಣ ಹೊಂದಿದ ಮುಖ್ಯೋಪಾಧ್ಯಾಯರಿಂದ ಮಾತ್ರ ಒಳ್ಳೆಯ ವಿದ್ಯಾರ್ಥಿ ಗುಂಪನ್ನು ಸಂಘಟಿಸಲು ಸಾಧ್ಯ ಎಂದರು

ಅಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ತಮಿಳುನಾಡಿನಲ್ಲಿ ಜೂನಿಯರ್ ರೆಡ್ ಕ್ರಾಸ್ನಲ್ಲಿ 42 ಲಕ್ಷ ಮಕ್ಕಳು ಭಾಗವಹಿಸಿದ್ದಾರೆ. ಅಂತೆಯೇ ನಮ್ಮಲ್ಲಿಯೂ ಕೂಡ ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಸಂಸ್ಥೆ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದರು.

ಕುಂದಾಪುರ ರೆಡ್ ಕ್ರಾಸ್ ಶಾಖೆ ಸಭಾಪತಿ ಜಯಕರ ಎಸ್. ಶೆಟ್ಟಿ, ಜೂನಿಯರ್ ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್.ಎನ್ ರಾಜು, ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ, ಖಜಾಂಜಿ ರಮಾದೇವಿ, ಕಾರ್ಯದರ್ಶಿ ರತ್ನಾಕರ ಬಿ. ಶೆಟ್ಟಿ ಮೊದಲಾದವರಿದ್ದರು.

ಜಿಲ್ಲೆಯ ಜೂನಿಯರ್ ರೆಡ್ ಕ್ರಾಸ್ ಡೈರೆಕ್ಟರ್ ಪದ್ಮಾ ಕಿಣಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!