Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಅಸಂಘಟಿತ ಕಾರ್ಮಿಕರನ್ನು ಇ ಶ್ರಮ್ ಯೋಜನೆಯಡಿ ನೋಂದಾಯಿಸಿ

ಅಸಂಘಟಿತ ಕಾರ್ಮಿಕರನ್ನು ಇ ಶ್ರಮ್ ಯೋಜನೆಯಡಿ ನೋಂದಾಯಿಸಿ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 15

ಅಸಂಘಟಿತ ಕಾರ್ಮಿಕರನ್ನು ಇ ಶ್ರಮ್ ಯೋಜನೆಯಡಿ ನೋಂದಾಯಿಸಿ
ಉಡುಪಿ: ಜಿಲ್ಲೆಯ ಎಲ್ಲಾ ಅರ್ಹ ಅಸಂಘಟಿತ ಕಾರ್ಮಿಕರನ್ನು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಹಾಗೂ ಇ- ಶ್ರಮ್ ಯೋಜನೆಯಲ್ಲಿ ನೋಂದಣಿ ಮಾಡಿ.

ಇದು ಕಾರ್ಮಿಕ ಇಲಾಖೆ ಮತ್ತು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ನೀಡಿದ ಸೂಚನೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ನಡೆದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಹಾಗೂ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಮ್ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯೋಜನೆಯ ಅರಿವು ಮೂಡಿಸಿ
ಜಿಲ್ಲೆಯಲ್ಲಿ 18ರಿಂದ 40 ವರ್ಷದೊಳಗಿನ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರನ್ನು ಈ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಕುರಿತಂತೆ ಅಸಂಘಟಿತ ಕಾರ್ಮಿಕರ ವೃತ್ತಿವಾರು ಸಂಘಗಳೊಂದಿಗೆ ಸಮಾಲೋಚನೆ ನಡೆಸಿ, ನಿಗದಿತ ಸ್ಥಳ ಮತ್ತು ದಿನಾಂಕ ನಿಗದಿಪಡಿಸಿಕೊಂಡು ಕಾರ್ಯಕ್ರಮ ಆಯೋಜಿಸಿ, ಎಲ್ಲಾ ಕಾರ್ಮಿಕರಿಗೆ ಯೋಜನೆಯ ಅರಿವು ಮೂಡಿಸಿ, ಸ್ಥಳದಲ್ಲೇ ನೋಂದಣಿ ಮಾಡುವ ಮೂಲಕ ಪಿಂಚಣಿ ಸೌಲಭ್ಯ ಪಡೆಯಲು ಯೋಜನೆಗೆ ಸೇರ್ಪಡೆ ಮಾಡುವಂತೆ ತಿಳಿಸಿದರು.

ಕಾರ್ಮಿಕರನ್ನು ಯೋಜನೆ ವ್ಯಾಪ್ತಿಗೊಳಪಡಿಸಲು ಕಾರ್ಯಕ್ರಮ ರೂಪಿಸಲು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಸಹಕಾರ ನೀಡಬೇಕು ಹಾಗೂ ಈ ಕಾರ್ಯಕ್ರಮಕ್ಕೆ ವಿವಿಧ ಸ್ವಯಂಸೇವಾ ಸಂಘಟನೆಗಳ ಸಹಕಾರ ಪಡೆಯಬೇಕು. ಅಸಂಘಟಿತ ಕಾರ್ಮಿಕರಿಗೆ ಯೋಜನೆಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಈ ತಿಂಗಳ 25ರ ನಂತರ ಜಿಲ್ಲೆಯಾದ್ಯಂತ ಕಾರ್ಮಿಕರ ಇ- ಶ್ರಮ್ ನೊಂದಣಿ ಮತ್ತು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ ಪಿಂಚಣಿ ಯೋಜನೆಗೆ ಸೇರ್ಪಡೆ ಕುರಿತಂತೆ ನಿರಂತರ ಶಿಬಿರಗಳನ್ನು ಆಯೋಜಿಸಿ, ಎಲ್ಲಾ ಅರ್ಹ ಕಾರ್ಮಿಕರನ್ನು ನೋಂದಣಿ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹಾಗೂ ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಕುರಿತೂ ಅರಿವು ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.

ಪಿಂಚಣಿ ಯೋಜನೆಗೆ ಸೇರ್ಪಡೆಗೊಳ್ಳಲು ಹಾಗೂ ಇ-ಶ್ರಮ್ ನಲ್ಲಿ ನೋಂದಾಯಿಸಲು ಕಾರ್ಮಿಕರು ಶಿಬಿರಗಳಲ್ಲಿ ಮಾತ್ರವಲ್ಲದೇ ತಮ್ಮ ಸಮೀಪದ ಕಾಮನ್ ಸರ್ವಿಸ್ ಸೆಂಟರ್ ಗಳಲೂ ನೋಂದಾಯಿಸಬಹುದು ಎಂದರು.

ಮಾಸಿಕ 3 ಸಾವಿರ ಪಿಂಚಣಿ
ಅಸಂಘಟಿತ ಕಾರ್ಮಿಕ ವಲಯದ ಬೀದಿ ಬದಿ ವ್ಯಾಪಾರಿಗಳು, ಹಮಾಲಿಗಳು, ಮನೆ ಕೆಲಸ ಮಾಡುವವರು, ರಿಕ್ಷಾ ಚಾಲಕರು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಗೃಹ ಆಧಾರಿತ ಕಾರ್ಮಿಕರು ಸೇರಿದಂತೆ ಇತರ ವೃತ್ತಿಯಲ್ಲಿರುವವರು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯ ಪಿಂಚಣಿ ಯೋಜನೆಯಲ್ಲಿ ಸೇರ್ಪಡೆಯಾಗುವ ಮೂಲಕ 60 ವರ್ಷದ ನಂತರ ಕನಿಷ್ಠ 3 ಸಾವಿರ ರೂ. ಖಚಿತ ಮಾಸಿಕ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ ಎಂದು ಡಿಸಿ ತಿಳಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ವಿವಿಧ ಅನುಷ್ಠಾನಾಧಿಕಾರಿಗಳು ಹಾಗೂ ಅಸಂಘಟಿತ ಕಾರ್ಮಿಕ ವಲಯದ ವಿವಿಧ ವೃತ್ತಿಗಳ ನಾಮನಿರ್ದೇಶಿತ ಸದಸ್ಯರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!