Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ವೃತ್ತಿಯಲ್ಲಿ ಸಾಮಾಜಿಕ ಕಳಕಳಿ ಅಗತ್ಯ

ವೃತ್ತಿಯಲ್ಲಿ ಸಾಮಾಜಿಕ ಕಳಕಳಿ ಅಗತ್ಯ

ಉಡುಪಿ: ತಾವು ನಿರ್ವಹಿಸುವ ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯೊಂದಿಗೆ ಸಾಮಾಜಿಕ ಕಳಕಳಿಯೂ ಅಗತ್ಯ ಎಂದು ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಏರ್ಪಡಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕೇವಲ 306 ಸದಸ್ಯ ಬಲದೊಂದಿಗೆ 4,600 ರೂ. ಠೇವಣಿಯಿಂದ ಆರಂಭವಾದ ತಮ್ಮ ಸೊಸೈಟಿ ಇಂದು 350 ಕೋ. ರೂ. ಠೇವಣಿ ಹೊಂದಿ 35 ಕೋ. ರೂ. ಲಾಭ ಗಳಿಸುತ್ತಿದೆ. 10 ಶಾಖೆಗಳನ್ನು ಹೊಂದಿ ಸುಮಾರು 100 ಕೋ. ರೂ. ಮೌಲ್ಯದ ಆಸ್ತಿ ಹೊಂದಿದೆ ಎಂದರು. ಸೊಸೈಟಿ ನಿರ್ದೇಶಕರು, ನೌಕರ ವೃಂದ ಹಾಗೂ ಗ್ರಾಹಕರ ಪ್ರಾಮಾಣಿಕ ಯತ್ನ ಹಾಗೂ ಜನತೆಯ ವಿಶ್ವಾಸದಿಂದ ಈ ಮಟ್ಟದಲ್ಲಿ ಸಾಧನೆ ಸಾಧ್ಯವಾಗಿದೆ ಎಂದವರು ವಿಶ್ಲೇಷಿಸಿದರು.

ಉಡುಪಿ ಗೃಹ ನಿರ್ಮಾಣ ಸಹಕಾರ ಸಂಘ ಅಧ್ಯಕ್ಷೆ ಇಂದೂ ರಮಾನಂದ ಭಟ್ ಸನ್ಮಾನಿಸಿದರು. ಶ್ವೇತಾ ಜಯಕರ ಶೆಟ್ಟಿ ಇದ್ದರು.

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂಜೀವ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಲ್. ಉಮಾನಾಥ್, ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಶೆಟ್ಟಿ, ನಿರ್ದೇಶಕರಾದ ವಸಂತ ಕಾಮತ್, ಪದ್ಮನಾಭ ನಾಯಕ್, ವಿನಯಕುಮಾರ್ ಟಿ. ಎ., ಅಬ್ದುಲ್ ರಝಾಕ್, ಜಾರ್ಜ್ ಸ್ಯಾಮುಯೆಲ್, ಜಯಾ ಶೆಟ್ಟಿ ಮತ್ತು ಗಾಯತ್ರಿ ಎಸ್. ಭಟ್ ಇದ್ದರು.

ಸೊಸೈಟಿ ಉಡುಪಿ ಶಾಖೆ ವ್ಯವಸ್ಥಾಪಕ ಪ್ರವೀಣಕುಮಾರ್ ಸ್ವಾಗತಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜೇಶ ವಿ. ಶೇರಿಗಾರ್ ವಂದಿಸಿದರು. ಮಣಿಪಾಲ ಶಾಖಾ ವ್ಯವಸ್ಥಾಪಕ ನವೀನ್ ಕೆ. ನಿರೂಪಿಸಿದರು. ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಾದ ರಾಘವೇಂದ್ರ ಶೇರಿಗಾರ್, ಮಹಮ್ಮದ್ ಸುಹಾನ್, ಜಯರಾಮ ಶೆಟ್ಟಿ, ಡಾ| ಯಾದವ ಕರ್ಕೇರ, ಬಿ. ಆರ್. ಅಡಿಗ, ಗೋಪಿಕೃಷ್ಣ ರಾವ್ ಮಾತನಾಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!