Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಬಹುಭಾಷಾ ಸಾಮರಸ್ಯದೊಂದಿಗೆ ಕನ್ನಡದ ಕೆಲಸ ಸಾಗಲಿ

ಬಹುಭಾಷಾ ಸಾಮರಸ್ಯದೊಂದಿಗೆ ಕನ್ನಡದ ಕೆಲಸ ಸಾಗಲಿ

ಬೆಂಗಳೂರು: ಬಹುಭಾಷಾ ಸಾಮರಸ್ಯಕ್ಕೆ ಧಕ್ಕೆ ಬಾರದಂತೆ ಕನ್ನಡ ಕಾಯಕ ವರ್ಷಾಚರಣೆ ಸಂಬಂಧ ಅಷ್ಟ ಕಾರ್ಯಸೂಚಿ ಕಾರ್ಯಗತಗೊಳಿಸಲು ತ್ರಿಕರಣಪೂರ್ವಕ ಶ್ರಮಿಸುವಂತೆ ಕನ್ನಡ ಕಾಯಕ ಪಡೆ ಪದಾಧಿಕಾರಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ. ಎಸ್. ನಾಗಾಭರಣ ಸಲಹೆ ನೀಡಿದರು.

ಇಲ್ಲಿನ ಹೊಸ ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಬೆಂಗಳೂರು ನಗರ ಜಿಲ್ಲೆ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಮತ್ತು ಬೆಂಗಳೂರು ವಿಧಾನಸಭಾ ಕ್ಷೇತ್ರದ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕದ ವಿವಿಧೆಡೆ ನಾಮಫಲಕಗಳಲ್ಲಿ ಕನ್ನಡವನ್ನು ತಪ್ಪು ತಪ್ಪಾಗಿ ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಹಾಕಲಾಗಿರುವ ನಾಮಫಲಕಗಳಲ್ಲಿ ಅರ್ಥರಹಿತ ಕನ್ನಡ ಪದಗಳನ್ನು ಬಳಕೆ ಮಾಡಲಾಗುತ್ತಿರುವುದನ್ನು ಗಮನಿಸಿದ್ದೇವೆ. ಹಾಗಾಗಿ ನಾಮಫಲಕಗಳಲ್ಲಿ ಶುದ್ಧ ಕನ್ನಡ ಬಳಕೆ ಮಾಡುವ ನಿಟ್ಟಿನಲ್ಲಿ ಸರಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು ಹಾಗೂ ಅಂಗಡಿ ಮುಂಗಟ್ಟುಗಳ ಮಾಲೀಕರು, ಮುಖ್ಯಸ್ಥರಿಗೆ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದು ಆಶಿಸಿದರು.

ಸದಸ್ಯರೊಂದಿಗೆ ಮೊದಲ ಬಾರಿ ಸಭೆ ನಡೆಸಿದ ಪ್ರಾಧಿಕಾರ ಅಧ್ಯಕ್ಷರು, ತಂತಮ್ಮ ವ್ಯಾಪ್ತಿಯಲ್ಲಿ ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಯಾವ ರೀತಿಯ ಕೆಲಸ ಆಗಬೇಕಿದೆ ಎಂಬುದನ್ನು ಪಟ್ಟಿ ಮಾಡಿಕೊಂಡು, ಅವುಗಳ ಅನುಷ್ಠಾನಕ್ಕೆ ಯೋಜನೆ ರೂಪಿಸಿಕೊಂಡು, ಕನ್ನಡ ಕಟ್ಟುವಿಕೆಯಲ್ಲಿ ಬಹುಭಾಷಾ ಸಾಮರಸ್ಯ ಹಾಳು ಮಾಡದಂತೆ ಕಾಯಾ ವಾಚಾ ಮನಸಾ ಎಚ್ಚರಿಕೆಯಿಂದ ಪ್ರಾಧಿಕಾರದ ಸಹಕಾರದೊಂದಿಗೆ ಅವಿರತ ಶ್ರಮಿಸುವಂತೆ ತಿಳಿಸಿದರು.

ರಸ್ತೆ, ಬಡಾವಣೆ, ನಾಮಫಲಕಗಳಲ್ಲಿ ಕನ್ನಡವನ್ನು ತಪ್ಪಾಗಿ ಬರೆದಿದ್ದರೆ, ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಶುದ್ಧ ಕನ್ನಡ ಬಳಸುವಂತೆ ಅವರಿಗೆ ಮನವರಿಕೆ ಮಾಡಿಕೊಡಿ. ಬ್ಯಾಂಕು, ರೈಲ್ವೆ, ಅಂಚೆ ಕಚೇರಿ, ಆದಾಯ ತೆರಿಗೆ, ವಿಮಾ ಸಂಸ್ಥೆ ಮುಂತಾದ ಕಡೆಗಳಲ್ಲಿ ಕನ್ನಡದಲ್ಲಿಯೇ ಅರ್ಜಿ ನಮೂನೆ ಬಳಸಿ, ಇತರರಿಗೂ ಈ ಬಗ್ಗೆ ಸಲಹೆ ನೀಡುವ ಮೂಲಕ ಜಾಗೃತಿ ಮೂಡಿಸಿ ಎಂದು ತಿಳಿಸಿದ ಅಧ್ಯಕ್ಷರು, ಕಾಯಕ ಪಡೆಯ ಚಟುವಟಿಕೆಗಳನ್ನು ಎಲ್ಲರಿಗೂ ಹಂಚಿಕೆ ಮಾಡಿ ಈ ಎಲ್ಲ ಕೆಲಸಗಳು ಯಶಸ್ವಿಯಾಗುವಲ್ಲಿ ಶ್ರಮಿಸುವಂತೆ ಕರೆ ನೀಡಿದರು.

ರಾಜ್ಯದ ಎಲ್ಲ ಜಿಲ್ಲೆಯ ಸದಸ್ಯರನ್ನು ಸಂಘಟಿಸಿ ಅವರೊಂದಿಗೆ ಬೃಹತ್ ಕಾರ್ಯಕ್ರಮ ಮಾಡಬೇಕೆಂಬ ನಮ್ಮ ಆಸೆಗೆ ಕೊರೊನಾ ಅಡ್ಡಿಯಾದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಎಲ್ಲರೊಂದಿಗೂ ಸಭೆ ನಡೆಸಲಾಗುವುದು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ| ಕೆ. ಮುರಳಿಧರ, ಸದಸ್ಯರು ಮಾಡಬೇಕಿರುವ ಕಾರ್ಯಚಟುವಟಿಕೆಗಳ ಮಾಹಿತಿ ಹಂಚಿಕೊಂಡರು. ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ| ವೀರಶೆಟ್ಟಿ, ಬೆಂಗಳೂರು ನಗರ ಜಿಲ್ಲೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಮತ್ತು ಬೆಂಗಳೂರು ವಿಧಾನಸಭಾ ಕ್ಷೇತ್ರದ ಕನ್ನಡ ಜಾಗೃತಿ ಸಮಿತಿ ಸದಸ್ಯರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!